×
Ad

ಭಟ್ಕಳ: ನವಾಯತ್ ಸಮುದಾಯದ ಸಹಸ್ರಮಾನೋತ್ಸವ ಸಮಾರಂಭ

ನವಾಯತ್ ಸಂಸ್ಕೃತಿಯ ವಸ್ತುಪ್ರದರ್ಶನ ಉದ್ಘಾಟನೆ

Update: 2023-01-03 23:50 IST

ಭಟ್ಕಳ: ಅರಬ್ ಮೂಲದ ಭಟ್ಕಳದ ನವಾಯತ್ ಮುಸ್ಲಿಮರು ವ್ಯಾಪಾರವನ್ನು ಅರಸುತ್ತಾ ಭಟ್ಕಳಕ್ಕೆ ಬಂದು ಒಂದು ಸಾವಿರ ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ಸಹಸ್ರಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ಜಮಾಅತುಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮೊಹತೆಶಮ್ ಹೇಳಿದ್ದಾರೆ.

ಜ.4 ಮತ್ತು 5ರಂದು ಚಿನ್ನಪಳ್ಳಿ ಬಳಿ ಇರುವ ಬೃಹತ್ ಮೈದಾನದಲ್ಲಿ ಆಯೋಜಿಸಿರುವ ಭಟ್ಕಳದ ನವಾಯತ್ ಸಮುದಾಯದ ಸಹಸ್ರಮಾನೋತ್ಸವ ಸಮಾರಂಭದ ಪ್ರಚಾರಾರ್ಥವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನವಾಯತ್ ಸಂಸ್ಕೃತಿಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಮುನ್ನ ನವಾಯತ್ ಬಾಂಧವರಿಂದ ಆಕರ್ಷಕ ಮೆರವಣಿಗೆ ನಡೆಯಿತು. ಅಂಜುಮನ್ ಪ್ರೌಢಶಾಲಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಸುಲ್ತಾನ್ ಸ್ಟ್ರೀಟ್ ಮೂಲಕ ಚಿನ್ನಪಳ್ಳಿ ಬಳಿ ಇರುವ ಬೃಹತ್ ಮೈದಾನದಲ್ಲಿ ಸಮಾವೇಶಗೊಂಡಿತು.  ಮೆರವಣಿಗೆಯಲ್ಲಿ ವಿವಿಧ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ಶಾಲಾ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದರು. ಭಟ್ಕಳದ ವಿವಿಧ ಕ್ರೀಡಾ ಮತ್ತು ಯುವಕ ಸಂಘಟನೆಗಳು ಭಟ್ಕಳದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  ಬಾಲಕರು, ವಯೋವೃದ್ಧರು ಬಿಳಿ ಅಂಗಿ ಮತ್ತು ಲುಂಗಿ, ಟೋಪಿ ಧರಿಸಿ ಆಕರ್ಷಕವಾಗಿ ಕಾಣುತ್ತಿದ್ದರು.

ಜಮಾಅತುಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಸಂಚಾಲಕ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದುಲ್ ರಬ್ ನದ್ವಿ ಮತ್ತಿತರರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಪಟೇಲ್, ಜಾಮಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೌಲಾ ಅಬ್ದುಲ್ ಅಲೀಮ್ ಖಾಸ್ಮಿ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತೀಕುರ‌್ರಹ್ಮಾನ್ ಮುನೀರಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಖಮರ್ ಸಾದಾ ಇದ್ದರು.

Similar News