ಹರ್ಯಾಣ ಸಚಿವನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ: ದೇಶ ತೊರೆಯಲು 1 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದ ಸಂತ್ರಸ್ತೆ

Update: 2023-01-04 10:57 GMT

ಹೊಸದಿಲ್ಲಿ: ಹರ್ಯಾಣ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿರುವ ಮಹಿಳಾ ಜೂನಿಯರ್ ಕೋಚ್ ಮಂಗಳವಾರ ವಿಶೇಷ ತನಿಖಾ ತಂಡದೆದುರು ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿ ದೇಶವನ್ನು ತೊರೆಯಲು  ಹಾಗೂ ಪ್ರಕರಣದ ಬಗ್ಗೆ ಮರೆತುಬಿಡಲು ತನಗೆ ರೂ. 1 ಕೋಟಿ ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಮಂಗಳವಾರ ಸಿಟ್ ಸುಮಾರು ಎಂಟು ಗಂಟೆಗಳ ಕಾಲ ಆಕೆಯ ಹೇಳಿಕೆ ದಾಖಲಿಸಿಕೊಂಡಿದೆ. ಈ ಸಂದರ್ಭ ತನಿಖೆಗಾಗಿ ಆಕೆಯ ಸೆಲ್ ಫೋನ್ ಅನ್ನು ಸಂತ್ರಸ್ತೆ ಸಿಟ್ ಅಧಿಕಾರಿಗಳಿಗೆ ನೀಡಿದ್ದಾರೆ.

ವಿಚಾರಣೆ ನಂತರ ಮಾಧ್ಯಮದ ಜೊತೆ ಮಾತನಾಡಿದ ಆಕೆ "ನಾನು ತನಿಖೆಗೆ ಸಹಕರಿಸುತ್ತಿದ್ದೇನೆ. ಚಂಡೀಗಢ ಪೊಲೀಸರ ತನಿಖೆಯ ಪ್ರಗತಿಯಿಂದ ಸಮಾಧಾನವಾಗಿದೆ. ನ್ಯಾಯ ದೊರಕುವವರೆಗೆ ಹೋರಾಡುತ್ತೇನೆ. ಸಚಿವರು (ಸಂದೀಪ್ ಸಿಂಗ್) ಇನ್ನೂ ಸರ್ಕಾರದಲ್ಲಿದ್ದಾರೆ. ರೂ. 1 ಕೋಟಿ ಪಡೆದುಕೊಳ್ಳುವಂತೆ, ಪ್ರಕರಣ ಮರೆತುಬಿಡುವಂತೆ ಹಾಗೂ ಒಂದು ತಿಂಗಳು ವಿದೇಶದಲ್ಲಿರುವಂತೆ ಅನಾಮಧೇಯ ವ್ಯಕ್ತಿಗಳು ನನಗೆ ಆಫರ್ ಮಾಡಿದ್ದಾರೆ," ಎಂದು ಹೇಳಿದ್ದಾರೆ.

ಅವರ ವಕೀಲ ದೀಪಾಂಶು ಬನ್ಸಾಲ್ ಮಾತನಾಡಿ, "ನಾವು ಪೊಲೀಸರ ಮುಂದೆ ಹಾಜರಾಗಿರುವುದು ಇದು ನಾಲ್ಕನೇ ಬಾರಿ. ಆದರೆ ಆರೋಪಿ ಸಂದೀಪ್ ಸಿಂಗ್ ಪೊಲೀಸರ ಮುಂದೆ ಒಂದು ಬಾರಿಯಾದರೂ ಇನ್ನಷ್ಟೇ ಹಾಜರಾಗಬೇಕಿದೆ," ಎಂದು ಹೇಳಿದ್ದಾರೆ.

ಸಂತ್ರಸ್ತೆಯನ್ನು ಅಕ್ರಮ ದಿಗ್ಬಂಧನದಲ್ಲಿರಿಸಿ ಲೈಂಗಿಕ ಕಿರುಕುಳ ನೀಡಿದ್ದೇ ಅಲ್ಲದೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಕಳೆದ ಶನಿವಾರ ಮಾಜಿ ಒಲಿಂಪಿಯನ್ ಆಗಿರುವ ಸಂಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸಿಂಗ್ ತಮ್ಮ ಕ್ರೀಡಾ ಖಾತೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ವಹಿಸಿದರೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.

Similar News