×
Ad

ಭಟ್ಕಳ: ಬಿಜೆಪಿ ಮಂಡಲದ ವತಿಯಿಂದ ಬಿಜೆಪಿ ಬೂತ್ ಅಭಿಯಾನ ಉದ್ಘಾಟನೆ

Update: 2023-01-04 16:47 IST

ಭಟ್ಕಳ: ಭಟ್ಕಳ ಬಿಜೆಪಿ ಮಂಡಲದ ವತಿಯಿಂದ ಇಲ್ಲಿನ ಮುಠಳ್ಳಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆವರಣದಲ್ಲಿ  ನಡೆದ ಬಿಜೆಪಿ ಬೂತ್ ಅಭಿಯಾನವನ್ನು ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಅವರು, ಜಿಲ್ಲೆಯ 14 ಮಂಡಲದಲ್ಲಿ ಬಿಜೆಪಿ ಬೂತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜ.2ರಿಂದ 12ರವರೆಗೆ ಪಕ್ಷದ ಸೂಚನೆಯ ಮೇರೆಗೆ ಮತಗಟ್ಟೆಗಳಲ್ಲಿ ವಾಟ್ಸಪ್ ಗ್ರೂಪ್‌ಗಳ ರಚನೆ, ಪೇಜ್ ಪ್ರಮುಖರ ನೇಮಕ, ಕಾರ್ಯಕರ್ತರ ಮನೆ ಮೇಲೆ ಧ್ವಜಾರೋಹಣ, ಪ್ರಧಾನಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಸೇರಿದಂತೆ 5 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಮಯವನ್ನು ನೀಡಬೇಕು. ಯಾವುದೇ ಹೋರಾಟ ಇರಲಿ ಸಿದ್ಧತೆ ಇದ್ದರೆ ಯಶಸ್ಸು ಸಾಧ್ಯ. ಪಕ್ಷದ ವರಿಷ್ಠರು 150 ಸ್ಥಾನಗಳ ಗುರಿಯನ್ನು ಹೊಂದಿದ್ದು, ಅದಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ರಾಜ್ಯ ಬಿಜೆಪಿ ಹಿಂದುಳಿದ  ವರ್ಗದ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿ, ದೇಶ,ಧರ್ಮ ರಕ್ಷಣೆಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಪಕ್ಷದ ಹುದ್ದೆಯನ್ನು ಸ್ವೀಕರಿಸಿದ ನಂತರ ಪಕ್ಷದ ಕೆಲಸವನ್ನು ಮಾಡಲೇಬೇಕು. ಪಕ್ಷಕ್ಕಾಗಿ ದುಡಿದವರಿಗೆ ಪಕ್ಷವೇ ಸೂಕ್ತ ಗೌರವ ಹುದ್ದೆಯನ್ನು ನೀಡುತ್ತದೆ. ಬಿಜೆಪಿಯಲ್ಲಿ ಮಾತ್ರ ಕಾರ್ಯಕರ್ತರಿಗೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೆ ಏರುವ ಅವಕಾಶ ಇದೆ. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್, ಶಾಂತಾರಾಮ ಸಿದ್ಧಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ ಗಸ್ತಿ ಇದಕ್ಕೆ ಅತ್ಯುತ್ತಮ ಉದಾಹರಣೆ  ಎಂದು ಅವರು ತಿಳಿಸಿದರು. 

ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ರಾಜ್ಯದ 58185 ಬೂತ್‌ಗಳಲ್ಲಿ ಬಿಜಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಬಾರಿಯೂ ಯಾವುದೋ ಅಲೆಯಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರತಿ ಬೂತ್‌ಗಳಲ್ಲಿ ಪಕ್ಷ ಸಂಘಟನೆಯಾದರೆ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಅದಕ್ಕೆ ಇತ್ತೀಚಿಗೆ ನಡೆದ ಗುಜರಾತ್ ಚುನಾವಣಾ ಸಾಕ್ಷಿಯಾಗಿದೆ ಫಲಿತಾಂಶವೇ ಎಂದರು.

ವೇದಿಕೆಯಲ್ಲಿ ಮೂಡಭಟ್ಕಳ 191 ಬೂತ್‌ ಅಧ್ಯಕ್ಷ ನಾಗೇಶ ನಾಯ್ಕ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ ನಾಯ್ಕ, ಮುಟ್ಟಳ್ಳಿ ಗ್ರಾಪಂ ಅಧ್ಯಕ್ಷ ಶೇಷಗಿರಿ ನಾಯ್ಕ, ಉಪಾಧ್ಯಕ್ಷೆ ಜಯಶ್ರೀ ನಾಯ್ಕ, ಬೂತ್ ವಿಜಯ ಅಭಿಯಾನದ ಸಂಚಾಲಕ ಶ್ರೀನಿವಾಸ ನಾಯ್ಕ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮುಕುಂದ ನಾಯ್ಕ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ರವಿ ನಾಯ್ಕ ಜಾಲಿ, ಬಿಜೆಪಿ ಮಾಜಿ ಸೈನಿಕ ಪ್ರಕೋಷ್ಠದ ಅಧ್ಯಕ್ಷ ಶ್ರೀಕಾಂತ ನಾಯ್ಕ, ಪ್ರಕೋಷ್ಠ ಸಂಕುಲ ಸಂಯೋಜಕ ದಿನೇಶ ನಾಯ್ಕ, ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಸುರೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಭಟ್ಕಳ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ ಸರ್ಪನಕಟ್ಟೆ, ಭಾಸ್ಕರ ದೈಮನೆ ಕಾರ್ಯಕ್ರಮ ನಿರೂಪಿಸಿದರು. 

Similar News