ಬಿಲ್ಕಿಸ್‌ ಬಾನು ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್‌ ನ್ಯಾ. ಬೇಲಾ ಎಂ ತ್ರಿವೇದಿ

Update: 2023-01-04 11:52 GMT

ಹೊಸದಿಲ್ಲಿ: ಗುಜರಾತ್‌ನಲ್ಲಿ 2002 ರಲ್ಲಿ ನಡೆದ ಮತೀಯ ಹಿಂಸಾಚಾರದ ವೇಳೆ ನಡೆದ ಬಿಲ್ಕಿಸ್‌ ಬಾನು (Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸಿದ ಗುಜರಾತ್‌ ಸರ್ಕಾರದ  ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆ ಬೇಲಾ ಎಂ ತ್ರಿವೇದಿ ಹಿಂದೆ ಸರಿದಿದ್ದಾರೆ.

ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಹಿತ ಹಲವಾರು ಮಂದಿ ಗುಜರಾತ್‌ ಸರ್ಕಾರದ ಕ್ರಮದ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಇದಕ್ಕೂ ಮುಂಚೆ ಜಸ್ಟಿಸ್‌ ತ್ರಿವೇದಿ ಅವರು ಸಂತ್ರಸ್ತೆ ಬಿಲ್ಕಿಸ್‌ ಬಾನು ಈ ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಗುಜರಾತ್‌ನವರಾಗಿರುವ ಜಸ್ಟಿಸ್‌ ತ್ರಿವೇದಿ ಜಿಲ್ಲಾ ನ್ಯಾಯಾಲಯದಲ್ಲಿ 1995 ರಲ್ಲಿ ಆರಂಭಿಕ ಸೇವೆ ಸಲ್ಲಿಸಿ ನಂತರ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿ ಫೆಬ್ರವರಿ 2011 ರಲ್ಲಿ ಗುಜರಾತ್‌ ಹೈಕೋರ್ಟ್‌ ನ್ಯಾಯಾಧೀಶೆಯಾಗಿ ಭಡ್ತಿಗೊಂಡಿದ್ದರು.

ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರ ನೇತೃತ್ವದ ಪೀಠವು ಮೂರನೇ ಪಕ್ಷಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು  ಬಿಲ್ಕಿಸ್‌ ಬಾನು ಸಲ್ಲಿಸಿದ ಅರ್ಜಿಯ ಜೊತೆಗೆ ಸೇರಿಸಿ ಜಸ್ಟಿಸ್‌ ತ್ರಿವೇದಿ ಅವರು ಪೀಠದ ಭಾಗವಾಗಿರದೇ ಇದ್ದ ಸಮಯ ವಿಚಾರಣೆ ನಡೆಸಲು ಪ್ರಕರಣವನ್ನು ಪಟ್ಟಿ ಮಾಡಿದೆ.

ಇತ್ತೀಚೆಗಷ್ಟೇ ಜಸ್ಟಿಸ್‌ ರಸ್ತೋಗಿ ನೇತೃತ್ವದ ಪುನರ್‌ಪರಿಶೀಲನಾ ಪೀಠವು ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೇ 2022 ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್‌ ಬಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

Similar News