ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ಒಂದು ತಿಂಗಳ ನಿಷೇಧ ಹೇರಿದ ಏರ್‌ ಇಂಡಿಯಾ

Update: 2023-01-04 12:38 GMT

ಹೊಸದಿಲ್ಲಿ: ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ, ಕುಡಿದ ಅಮಲಿನಲ್ಲಿ ತನ್ನ ಮಹಿಳಾ ಸಹಯಾತ್ರಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಮೇಲೆ ಏರ್ ಇಂಡಿಯಾ ಒಂದು ತಿಂಗಳ ಕಾಲ ನಿಷೇಧ ಹೇರಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಘಟನೆ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ನಡೆದಿದ್ದು, ಒಂದು ತಿಂಗಳ ನಂತರ ಈ ನಿಷೇಧ ಹೇರಲಾಗಿದೆ.   “ಪ್ರಯಾಣಿಕನಿಗೆ ಏರ್ ಇಂಡಿಯಾದಲ್ಲಿ 30 ದಿನಗಳವರೆಗೆ ಅಥವಾ ಆಂತರಿಕ ಸಮಿತಿಯ ನಿರ್ಧಾರದವರೆಗೆ ವಿಮಾನಯಾನ ಮಾಡುವುದನ್ನು ನಿಷೇಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ, ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಅಶಿಸ್ತಿನ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.” ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ವಿಮಾನದ ಸಿಬ್ಬಂದಿಯ ಭಾಗದಲ್ಲಿನ ಲೋಪಗಳನ್ನು ತನಿಖೆ ಮಾಡಲು ಮತ್ತು "ಪರಿಸ್ಥಿತಿಯ ತ್ವರಿತ ಪರಿಹಾರವನ್ನು ವಿಳಂಬಗೊಳಿಸಿದ ನ್ಯೂನತೆಗಳನ್ನು ಪರಿಹರಿಸಲು" ಆಂತರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

"ಪ್ರಯಾಣಿಕನೊಬ್ಬ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ ಮತ್ತು ಇನ್ನೊಬ್ಬರ ಮೇಲೆ ಪರಿಣಾಮ ಬೀರುವ ಘಟನೆಯ ಬಗ್ಗೆ ನಮಗೆ ತಿಳಿದಿದೆ. ತನಿಖೆ ಮತ್ತು ವರದಿ ಮಾಡುವ ಪ್ರಕ್ರಿಯೆಯಲ್ಲಿ ನಾವು ನೊಂದ ಪ್ರಯಾಣಿಕರು ಮತ್ತು ಅವರ ಕುಟುಂಬದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ, ”ಎಂದು ಅವರು ಹೇಳಿದ್ದಾರೆ.

ಈ ನಡುವೆ, ಕಿರುಕುಳ ಮತ್ತು ಅಸಭ್ಯ ಕೃತ್ಯದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತ ಮಹಿಳೆ,   ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದು ಕುಡಿದ ಮತ್ತಿನಲ್ಲಿ ಸಹ-ಪ್ರಯಾಣಿಕ ತನ್ನ ಮೇಲೆ ಮೂತ್ರ ವಿಸರ್ಜಿಸಿದ ಘಟನೆಯ ಬಗ್ಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.

Similar News