ನಿಷೇಧಾಜ್ಞೆ ಉಲ್ಲಂಘಕರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬಹುದಾದ ಗುಜರಾತ್‌ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

Update: 2023-01-04 12:07 GMT

ಹೊಸದಿಲ್ಲಿ: ಕ್ರಿಮಿನಲ್‌ ದಂಡ ಸಂಹಿತೆಯ ಸೆಕ್ಷನ್‌ 144 ಅನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುವು ಮಾಡಿಕೊಡುವ  ಕ್ರಿಮಿನಲ್‌ ದಂಡ ಸಂಹಿತೆ (ಗುಜರಾತ್‌ ತಿದ್ದುಪಡಿ) ಕಾಯಿದೆ 2021 ಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ ರಾಜ್ಯ ವಿಧಾನಸಭೆ ಈ ಮಸೂದೆಯನ್ನು ಅನುಮೋದಿಸಿತ್ತು.

ಸೆಕ್ಷನ್‌ 144 ಅನ್ವಯ ಹೊರಡಿಸಲಾದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಡೆಸಲಾಗುವ ಯಾವುದೇ ಪ್ರತಿಭಟನೆಯನ್ನು ಐಪಿಸಿ ಸೆಕ್ಷನ್‌ 188 ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಈ ಮಸೂದೆ  ಪರಿಗಣಿಸಲಿದೆ.

ಈ ಮಸೂದೆಯ ಪ್ರಕಾರ  ಕ್ರಿಮಿನಲ್‌ ದಂಡ ಸಂಹಿತೆಯ ಸೆಕ್ಷನ್‌ 144 ಅನುಸಾರ ನಿಷೇಧಾಜ್ಞೆ ಹೊರಡಿಸಲು ಗುಜರಾತ್‌ ಸರ್ಕಾರ, ಪೊಲೀಸ್‌ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಅಧಿಕಾರವಿದೆ ಹಾಗೂ ಅವರು ಈ ನಿಷೇಧಾಜ್ಞೆಯ ಮೂಲಕ ಯಾವುದೇ ವ್ಯಕ್ತಿಗೆ ಒಂದು ನಿರ್ದಿಷ್ಟ ಕೃತ್ಯ ನಡೆಸದಂತೆ ಸೂಚಿಸಲು ಅಥವಾ  ಸಾರ್ವಜನಿಕ ಶಾಂತಿಗೆ ಧಕ್ಕೆ ತರುವುದನ್ನು ತಡೆಯಲು ಕ್ರಮಕೈಗೊಳ್ಳಲು ಅಧಿಕಾರ ನೀಡುತ್ತದೆ.

ನಿಷೇದಾಜ್ಞೆ ಆದೇಶ ಜಾರಿಯಾಗುತ್ತಿದೆಯೇ ಎಂದು ಪರಿಶೀಲನೆ ವೇಳೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಐಪಿಸಿ ಸೆಕ್ಷನ್‌ 188 ಅನ್ವಯ ಅವರು ಉಲ್ಲಂಘಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬಹುದಾಗಿದೆ.

Similar News