ಅಲ್-ಅಕ್ಸಾ ಮಸೀದಿಯ ಸ್ಥಿತಿ ಬದಲಾವಣೆ ವಿರುದ್ಧ ಇಸ್ರೇಲ್‍ಗೆ ಅಮೆರಿಕ ಎಚ್ಚರಿಕೆ

Update: 2023-01-04 17:37 GMT

ವಾಷಿಂಗ್ಟನ್, ಜ.4: ಯೆಹೂದಿಗಳು ಮತ್ತು ಮುಸ್ಲಿಮರಿಬ್ಬರಿಗೂ ಪವಿತ್ರವಾದ ಅಲ್-ಅಕ್ಸಾ ಮಸೀದಿ ಆವರಣಕ್ಕೆ ಇಸ್ರೇಲ್‍ನ ಹೊಸ ಸರಕಾರದ ಬಲಪಂಥೀಯ ಸಚಿವರೊಬ್ಬರ ಭೇಟಿಯ ಬಗ್ಗೆ ಅಮೆರಿಕ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದು ಈ ಪವಿತ್ರ ಸ್ಥಳದಲ್ಲಿ ಯಾವುದೇ ಸ್ಥಿತಿ ಬದಲಾವಣೆಯ ವಿರುದ್ಧ ಎಚ್ಚರಿಕೆ ನೀಡಿದೆ.

ಜೆರುಸಲೇಂನ ಪವಿತ್ರ ಸ್ಥಳದ ಯಥಾಸ್ಥಿತಿ ಕಾಪಾಡುವ ವಿಷಯಕ್ಕೆ ಸಂಬಂಧಿಸಿ ನಮ್ಮ ನಿಲುವು ದೃಢವಾಗಿದೆ. ಯಥಾಸ್ಥಿತಿಗೆ ಧಕ್ಕೆ ತರುವ ಯಾವುದೇ ಏಕಪಕ್ಷೀಯ ಕ್ರಮವು ಸ್ವೀಕಾರಾರ್ಹವಲ್ಲ  ಎಂದು ಶ್ವೇತಭವನದ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದಲ್ಲಿ ಭದ್ರತಾ ಸಚಿವರಾಗಿರುವ, ಪ್ರಚೋದನಕಾರಿ ಹೇಳಿಕೆ ನೀಡಿರುವ ಇತಿಹಾಸ ಹೊಂದಿರುವ  ಇಟಾಮರ್ ಬೆಂಗ್ವಿರ್ ಅವರು  ಜೆರುಸಲೇಂನ ಅಲ್-ಅಕ್ಸಾ ಮಸೀದಿಗೆ ಭೇಟಿ ನೀಡಿರುವ ಬಗ್ಗೆ ಅಮೆರಿಕ ತೀವ್ರ ಕಳವಳಗೊಂಡಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‍ಪ್ರೈಸ್ ಹೇಳಿದ್ದಾರೆ.

ಈ ಭೇಟಿಯು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಸಾಮಥ್ರ್ಯವನ್ನು ಹೊಂದಿದೆ. ಈ ವಿಷಯದ ಬಗ್ಗೆ ಅಮೆರಿಕವು ಪ್ರಧಾನಿಯವರ ಕಚೇರಿಯ ಪ್ರತಿನಿಧಿಗಳ ಜತೆ ನೇರ ಮಾತುಕತೆ ನಡೆಸಿದೆ ಎಂದವರು ಹೇಳಿದ್ದಾರೆ. ಅಲ್-ಅಕ್ಸಾ ಮಸೀದಿಗೆ  ಇಟಾಮರ್ ಬೆಂಗ್ವಿರ್  ಭೇಟಿ ನೀಡಿರುವುದಕ್ಕೆ ಇಸ್ಲಾಮಿಕ್ ಜಗತ್ತಿನಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Similar News