4 ಸ್ಥಳದಿಂದ ಇಮ್ರಾನ್ ಮೇಲೆ ಗುಂಡಿನ ದಾಳಿ, ಇನ್ನೂ ಮೂವರು ಶೂಟರ್‍ ಗಳು ಭಾಗಿಯಾಗಿದ್ದರು: ಜೆಐಟಿ ವರದಿ

Update: 2023-01-04 17:29 GMT

ಇಸ್ಲಮಾಬಾದ್, ಜ.4: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‍ಖಾನ್ ಅವರ ಮೇಲೆ 4 ಕಡೆಯಿಂದ ಗುಂಡಿನ ದಾಳಿ ನಡೆದಿದ್ದು ಬಂಧಿತ ಶಂಕಿತನ ಜತೆಗೆ ಇನ್ನೂ ಮೂವರು ಶೂಟರ್‍ಗಳು ದಾಳಿಯಲ್ಲಿ  ಪಾಲ್ಗೊಂಡಿದ್ದರು ಎಂದು   ಹತ್ಯೆ ಪ್ರಯತ್ನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ(ಜೆಐಟಿ)ದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್‍ಖಾನ್ ಮೇಲೆ ನವೆಂಬರ್ 3ರಂದು ವಝೀರಾಬಾದ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಮ್ರಾನ್ ಬಲಗಾಲಿಗೆ ಗುಂಡೇಟು ತಗಲಿತ್ತು. `ಸ್ಥಳದಲ್ಲೇ ಬಂಧಿಸಲ್ಪಟ್ಟ ಶಂಕಿತ ವ್ಯಕ್ತಿ ನವೀದ್ ಮೆಹರ್ ಮಾತ್ರ ಗುಂಡು ಹಾರಿಸಿದ್ದಲ್ಲ, ಅಪರಿಚಿತ ಮೂವರು, ಗುರುತಿಸಲಾಗದ ಆಯುಧಗಳಿಂದ ಸಾಕಷ್ಟು ಎತ್ತರದಿಂದ ಗುಂಡು ಹಾರಿಸಿದ್ದಾರೆ' ಎಂದು ಜೆಐಟಿ ಸದಸ್ಯರನ್ನು ಉಲ್ಲೇಖಿಸಿ `ದಿ ಡಾನ್' ದಿನಪತ್ರಿಕೆ ವರದಿ ಮಾಡಿದೆ. ಪ್ರತಿಭಟನಾ ರ್ಯಾಲಿಯಲ್ಲಿ ಕಂಟೈನರ್ ಮೇಲಿದ್ದ ಟ್ರಕ್‍ನಲ್ಲಿ ಭಾಷಣ ಮಾಡುತ್ತಿದ್ದ ಇಮ್ರಾನ್‍ಖಾನ್‍ಗೆ 3 ಗುಂಡೇಟು ತಗುಲಿದೆ. ಗುಂಡಿನ ದಾಳಿ ಸಂದರ್ಭ 13 ಜನರಿಗೆ ಗುಂಡೇಟು ಬಿದ್ದಿದೆ. ಪಿಟಿಐ ಪಕ್ಷದ ರ್ಯಾಲಿಯಲ್ಲಿ ಭದ್ರತಾ ವ್ಯವಸ್ಥೆಯಲ್ಲಿ `ಕೆಲವು ತಪ್ಪುನಿರ್ವಹಣೆ' ಆಗಿರುವುದನ್ನೂ ಲಾಹೋರ್ ಪೊಲೀಸ್ ಮುಖ್ಯಸ್ಥ ಗುಲಾಂ ಮಹ್ಮೂದ್ ಡೊಗರ್ ನೇತೃತ್ವದ ಜೆಐಟಿ ಎತ್ತಿತೋರಿಸಿದೆ.

ಗುಂಡಿನ ದಾಳಿ ಪ್ರಕರಣದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಪಂಜಾಬ್ ಪ್ರಾಂತದ ಗೃಹ ಸಚಿವ ಒಮರ್ ಸಫ್ರ್ರಾಝ್ ಚೀಮಾ `ಖಾನ್ ಮೇಲಿನ ದಾಳಿ ಸಂಘಟಿತ, ಚೆನ್ನಾಗಿ ಯೋಜಿಸಿದ  ಪಿತೂರಿಯಾಗಿದೆ. ನವೀದ್ ಒಬ್ಬ ತರಬೇತಿ ಪಡೆದ ಹಂತಕ. ಆತ ತನ್ನ ಸಹಚರರೊಂದಿಗೆ ಅಪರಾಧದ ಸ್ಥಳದಲ್ಲಿ ಹಾಜರಿದ್ದ. ನವೀದ್ ಸುಳ್ಳುಪತ್ತೆ ಪರೀಕ್ಷೆಯಲ್ಲೂ ವಿಫಲನಾಗಿದ್ದಾನೆ. ರ್ಯಾಲಿ ಸಂದರ್ಭ ಅಝಾನ್ ಮೊಳಗಿದಾಗ ಖಾನ್‍ರನ್ನು ಹತ್ಯೆಗೈಯಲು ಬಯಸಿದ್ದೆ ಎಂದಾತ ತನಿಖೆಯ ಸಂದರ್ಭ ಬಾಯ್ಬಿಟ್ಟಿದ್ದಾನೆ' ಎಂದಿದ್ದರು. 

Similar News