ಸಾಹಿತ್ಯ (ಪರಿಷತ್) ಸಂಕಟಗಳು

Update: 2023-01-05 05:45 GMT

ಸಮ್ಮೇಳನಪೂರ್ವದ ಈ ಅವಧಿಯ ಪರಿಷತ್ತಿನ ಲಕ್ಷಣಗಳಲ್ಲೇ ಅವರ ಮತೀಯ, ಮತಾಂಧ ಕಲ್ಪನೆ ಮಾತ್ರವಲ್ಲ, ಬಲಪಂಥೀಯ ಧೋರಣೆಗೆ ವಿರುದ್ಧವಾದ ಇತರ ಕೋಮಿನ ಮುಖ್ಯವಾಗಿ ಹಿಂದೂ ಮತ್ತು ಕ್ರೈಸ್ತ ಲೇಖಕರಿಗೂ ಸಮ್ಮೇಳನದಲ್ಲಿ ಅವಕಾಶವಿಲ್ಲವೆಂಬುದು ಸ್ಪಷ್ಟವಿತ್ತು. ಈ ತಾರತಮ್ಯ ಅವರ ಧೋರಣೆಗೆ ತಕ್ಕುದೇ ಆಗಿದೆ. ಆದ್ದರಿಂದ ಇಂತಹ ಸಮ್ಮೇಳನದಲ್ಲಿ ಸಮತೋಲವನ್ನಾಗಲೀ, ಸಂವೇದನೆಯನ್ನಾಗಲೀ ಹುಡುಕುವುದೇ ಮೂರ್ಖತನ.



ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಆರಂಭವಾಗುವುದಕ್ಕೆ ಮೊದಲೇ ಎಬ್ಬಿಸಿದ ಈ ಧೂಳು ಹಿಂದೆ ಹಾಸನದಲ್ಲಿ ಸಮ್ಮೇಳನವಾದಾಗ ಆಗಿನ ಪ್ರಧಾನಿ ದೇವೇಗೌಡರು ಸಮ್ಮೇಳನದ ಉದ್ಘಾಟನೆಗಾಗಿ ಗಗನಮಾರ್ಗವಾಗಿ ಬಂದು ಸಮ್ಮೇಳನದ ಪಕ್ಕದ ಮೈದಾನದಲ್ಲಿಳಿದಾಗ ಅದರ ಗಾಳಿಗೆ ಮೇಲೆದ್ದ ಧೂಳಿಗಿಂತಲೂ ಹೆಚ್ಚು ಅನ್ನಿಸುವಂತಿದೆ. ಇದಕ್ಕೆ ಪರ್ಯಾಯವಾಗಿ ಜನಸಾಹಿತ್ಯ ಸಮ್ಮೇಳನವನ್ನು ಪ್ರತಿಬಣ ಜನವರಿ 8ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿವೆ. ಆಹ್ವಾನಿತರ ಪೈಕಿ ಕೆಲವರಾದರೂ ಪರಿಷತ್ತಿನ ಮಾರ್ಗವನ್ನು ಪ್ರತಿಭಟಿಸಿ, ವಿರೋಧಿಸಿ ಅಥವಾ ಇಷ್ಟಪಡದೆ ಹಿಂಜರಿದಿದ್ದಾರೆ. ಉಳಿದವರು ಭಾಗವಹಿಸದಿರುವುದಕ್ಕೆ ಹಿಂಜರಿದಿದ್ದಾರೆ.

ಮುಖ್ಯವಾಗಿ ಮುಸ್ಲಿಮ್ ಲೇಖಕರನ್ನು ಸಮ್ಮೇಳನದ ಮುಖ್ಯ ಭೂಮಿಕೆಯಲ್ಲಿ ಸೇರಿಸಿಕೊಳ್ಳದಿರುವುದೇ ಈ ವಿರೋಧ, ಪ್ರತಿಭಟನೆಗೆ ಕಾರಣವೆನ್ನಲಾಗಿದೆ. ಈ ಬಗ್ಗೆ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರು ಸಮ್ಮೇಳನದಲ್ಲಿ ಸೇರಿಸಲಾದ ಒಂದಷ್ಟು ಜನರನ್ನು ಹೆಸರಿಸಿದ್ದಾರೆ. ಇವರೆಲ್ಲ ಪೋಷಕಪಾತ್ರಗಳಲ್ಲೂ ಇಲ್ಲವೆನ್ನುವುದು ಮತ್ತು ಯಕಶ್ಚಿತ್ ಸೌಕುಮಾರ್ಯದ ಪಾತ್ರಗಳು ಎಂಬುದು ಗಮನಿಸಬೇಕಾದ ವಿಚಾರ. ಈ ಸಮಸ್ಯೆ ಈಗ ಯಾಕೆ ಉಂಟಾಯಿತೆಂಬುದು ಮತ್ತು ಇದರ ಪರ ವಿರೋಧ ವಾದಗಳನ್ನು ಹೂಡುವಲ್ಲಿ ನಾವು ತಪ್ಪುಮಾಡುತ್ತಿದ್ದೇವೇನೋ ಅನ್ನಿಸುವಂತಿದೆ ಸಂದರ್ಭ. ಕಾರಣಗಳನ್ನು ಹುಡುಕೋಣ: ಕನ್ನಡ ನೆಲದಲ್ಲಿ (ಪ್ರಾಯಃ ಇಂದಿನ ವಾಸ್ತವದಲ್ಲಿ ಅದು ಜಾಗತಿಕ ಕನ್ನಡ ಮನಸ್ಸುಗಳನ್ನೊಳಗೊಂಡಿದೆಯೆಂದು ತಿಳಿಯಬೇಕು) ಕನ್ನಡ ಮಾತೃಭಾಷೆಯಾಗಿರುವ ಅಥವಾ ನಾಡಭಾಷೆಯಾದ ಕನ್ನಡವನ್ನು ಮಾತಿಗೋ, ವ್ಯವಹಾರಕ್ಕೋ, ಅನಿವಾರ್ಯಕ್ಕೋ ಬಳಸುವ ಜನಸಂಖ್ಯೆಯ ಶೇ.1 ಕನ್ನಡಿಗರನ್ನೂ ಸದಸ್ಯರನ್ನಾಗಿ ಹೊಂದಿಲ್ಲದ, ನೋಂದಣಿಗೊಂಡ ಒಂದು ಸ್ವಾಯತ್ತ ಸಂಘಟನೆಯಾದ, ಕನ್ನಡ ಸಾಹಿತ್ಯ ಪರಿಷತ್ ತನ್ನ ಪಾಡಿಗೆ ತಾನು ಸಮ್ಮೇಳನಗಳನ್ನಾದರೂ ಮಾಡಲಿ, ಇನ್ನೇನಾದರೂ ಮಾಡಲಿ ಎಂದು ಸುಮ್ಮನಿರಬಹುದಿತ್ತು.

ಸಾಮಾನ್ಯವಾಗಿ ಸಂಘಗಳ ಕಾಯ್ದೆಯನ್ವಯ ನೋಂದಾಯಿತವಾದ ಸಾರ್ವಜನಿಕ ಸಂಸ್ಥೆಗಳ ಚುನಾವಣೆ, ನಿಗದಿತ ಅವಧಿಯಲ್ಲಿ ಲೆಕ್ಕಪತ್ರಗಳ ಪರಿಶೋಧನೆೆ ಮುಂತಾದ ಸೀಮಿತ ವಿಚಾರಗಳಲ್ಲಿ ಮಾತ್ರ ಸರಕಾರದ ಹಸ್ತಕ್ಷೇಪವಿರುತ್ತದೆ. ಈ ಹಸ್ತಕ್ಷೇಪದ ಉದ್ದೇಶ ಅಕ್ರಮಗಳನ್ನು ತಡೆಯುವುದು. ಸಂಸ್ಥೆ ತಪ್ಪಾಗಿ ಕಾರ್ಯಪ್ರವೃತ್ತವಾಗುತ್ತಿದೆಯೆಂದು ಕಂಡುಬಂದಾಗ ತಾತ್ಕಾಲಿಕವಾಗಿ ಆಡಳಿತಾಧಿಕಾರಿಯನ್ನು ನೇಮಿಸುವುದು, ಲೆಕ್ಕಪತ್ರಗಳನ್ನು ತಪಾಸಣೆ ಮಾಡುವುದು, ಲೋಪದೋಷಗಳ ಕುರಿತು ವಿಚಾರಣೆ ಮಾಡುವುದು ಇವೇ ಮುಂತಾದ ಕಾನೂನು ಬಾಧಿತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಸರಕಾರದ ಕೆಲಸ, ಹೊಣೆ. ಆದರೆ ಅನೇಕ ಬಾರಿ ಅನಧಿಕೃತತೆಗೆ ಅಧಿಕೃತತೆ ಪ್ರಾಪ್ತವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಜನಮನ್ನಣೆಗೆ ಪಾತ್ರವಾಗಲು ಮುಖ್ಯ ಕಾರಣವೆಂದರೆ ಅದನ್ನು ಕನ್ನಡ ಭಾಷೆ-ಸಾಹಿತ್ಯದ ಅಧಿಕೃತ ಪ್ರತಿನಿಧಿಯೆಂದು ಸರಕಾರವೇ ಮಾನ್ಯಮಾಡಿರುವುದು. ಇಲ್ಲವಾದರೆ ಅದರ ಅಧ್ಯಕ್ಷರಿಗೆ ಸಚಿವ ಸ್ಥಾನ-ಮಾನ, ಸರಕಾರದಿಂದ ಅದರ ಕಾರ್ಯ-ಕ್ರಮಗಳಿಗೆ ಅನುದಾನ/ಧನಸಹಾಯ, ಸಮ್ಮೇಳನಗಳಿಗೆ ಸರಕಾರಿ ನೌಕರರ ಒಂದು ದಿನದ ಸಂಬಳದ ಕಡಿತ ಮತ್ತು ಸರಕಾರಿ ನೌಕರರಿಗೆ (ಮುಖ್ಯವಾಗಿ ಶಿಕ್ಷಕರಿಗೆ) ಸಮ್ಮೇಳನಗಳ ಹಾಜರಾತಿಗೆ ಸಕಲ ಗೌರವಗಳೊಂದಿಗೆ ಕರ್ತವ್ಯದ ಮೇಲೆ ರಜೆ ಘೋಷಿಸುವುದು ಮುಂತಾದವು (ಅಂದರೆ ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ!) ಇರುತ್ತಿರಲಿಲ್ಲ. (ಗೂಟದ ಕಾರು ಎಂಬ ವಿಶೇಷಣವನ್ನು ಹೊತ್ತ ಕಾರಿನ ಬಗ್ಗೆ ಬರಗೂರರ ಹಾಗೆ ಕೆಲವರಾದರೂ ಲೇವಡಿ ಮಾಡಿದ್ದಿತ್ತು.) ಕಳೆದ ಕೆಲವು ಚುನಾವಣೆಗಳಲ್ಲಿ ಜಾತಿ-ಧರ್ಮ ಇತ್ಯಾದಿ ಅನಿಷ್ಠಗಳ ಕಮಟು ವಾಸನೆಯೆದ್ದಿದೆ. ಇಷ್ಟಾಗಿಯೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಎಲ್ಲೋ ಇದೆಯೆಂದು ಅನ್ನಿಸುವ ವಾತಾವರಣವಿತ್ತು. ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ನಡೆಯುವಾಗಲೇ ಜಾತಿ-ಧರ್ಮಗಳ ಪ್ರಭಾವ ನಭೂತೋ ಎಂಬಂತಿತ್ತು. ಇವರು ನಮ್ಮವರು ಎಂಬ ಮಾತು ಪಕ್ಷಾಧಾರಿತ, ಧರ್ಮಾಧಾರಿತ, ಜಾತ್ಯಾಧಾರಿತವಾಗಿ ಪ್ರಚಾರವಾಗಿತ್ತು. ಇವನಾರವ? ಎಂದು ಕೆಳಿದ ಬಸವಣ್ಣ ಎಲ್ಲೋ ಮರೆಯಾಗಿದ್ದ. ಈ ಕುರಿತು ಮುಂದೆ ಇನ್ನಷ್ಟು.

ಕಳೆದ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಅಕಾಡಮಿ, ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳಂತೆ ವಿಚಾರ ಸಂಕಿರಣಗಳು, ಪ್ರಶಸ್ತಿಗಳು, ದತ್ತಿನಿಧಿ, ಸಮ್ಮೇಳನಗಳು ಮತ್ತು ಪುಸ್ತಕ ಪ್ರಕಟಣೆ ಇಂತಹ ವ್ಯಾಯಾಮಗಳಲ್ಲಿ ತೊಡಗಿದ್ದೇ ಜಾಸ್ತಿ. (ನಾನು ಕೇಂದ್ರ ಪ್ರಕಟಣಾ ಸಮಿತಿಯಲ್ಲಿದ್ದಾಗ ನನ್ನ ಮತ್ತು ಇತರ ಸದಸ್ಯರ ಗಮನಕ್ಕೆ ಬಾರದೆ/ತಾರದೆ ಅನೇಕ ಪುಸ್ತಕಗಳು ಪ್ರಕಟವಾಗಿದ್ದವೆಂದು ನನಗೆ ನನ್ನ ಸದಸ್ಯತನ ಮುಗಿದ ಬಳಿಕ ಗೊತ್ತಾಗಿತ್ತು!) ಅದರಲ್ಲೂ ಸಂಸ್ಥೆಗಳ ಬಳಗದವರ ಪುಸ್ತಕ ಪ್ರಕಟಣೆಗಳೇ ಹೆಚ್ಚಾಗಿರುವುದೂ ಈ ಸಂಸ್ಥೆಗಳ ಲಕ್ಷಣವಾಗಿರುವುದೂ ಇದೆ. ಸರಕಾರವನ್ನು ಓಲೈಸುತ್ತಲೇ ತಮ್ಮ ಬೇಳೆ ಬೇಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಲ್ಲೂ ಪರಿಷತ್ತು ತನ್ನ ಸ್ವಾಯತ್ತೆಯನ್ನು ಬಲಿಕೊಟ್ಟ ಉದಾಹರಣೆಗಳು ಇಲ್ಲವೆಂದಲ್ಲ; ಆದರೆ ಅವು ತೀರ ವಿರಳ, ವೈಯಕ್ತಿಕ. ಚಂದ್ರಶೇಖರ ಪಾಟೀಲರಂತೂ ತಮ್ಮ ಇತರ ದೋಷಗಳ ನಡುವೆಯೂ ಸಮ್ಮೇಳನದ ಸಂದರ್ಭದಲ್ಲಿ ಸರಕಾರಕ್ಕೆ ಸೆಡ್ಡುಹೊಡೆದಿದ್ದರು. ಸದ್ಯ ಸಮ್ಮೇಳನಗಳ ಕಡೆಗೆ ಗಮನ ಹರಿಸೋಣ: ಇತರ ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳಂತೆ ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವೇ ಮಂದಿ ಇರುವ ಕಾಲವೊಂದಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದ ಹೊಸದರಲ್ಲಿ ಸಾಹಿತ್ಯ ಸಮ್ಮೇಳನಗಳಿಗೆ ಜನರ ಭಾಗವಹಿಸುವಿಕೆ ಹೆಚ್ಚಿರಲಿಲ್ಲ. ಕೆಲವೇ ವಿದ್ವನ್ಮಣಿಗಳು, ಸಾಹಿತಿಗಳು ಇರುತ್ತಿದ್ದರಂತೆ. ಎಲ್ಲರೂ ಬಸ್ಸಿನಲ್ಲೋ, ನಡೆದೋ ಭಾಗವಹಿಸುತ್ತಿದ್ದರು. ಗಾದೆಯಿರುವುದು ರಾಯರ ಕುದುರೆ ಕತ್ತೆಯಾಯಿತು ಎಂದಿದ್ದರೂ. ಆದರೆ ಪರಿಷತ್ತಿನ ಸಂದರ್ಭದಲ್ಲಿ ಬರಬರುತ್ತಾ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯ, ಪ್ರತಿಷ್ಠೆ, ವರ್ಚಸ್ಸು, ಕಾಂಚಾಣ, ಕೆಲಸಮಾಡಲು ಆರಂಭಿಸಿತು. ಹೀಗಿದ್ದರೂ ನವೋದಯ, ನವ್ಯದ (ಇವೆಲ್ಲವೂ ಸೇರಿ ತಾನೇ ಶ್ರೇಷ್ಠ ಕನ್ನಡವಾಗುವುದು?) ಶ್ರೇಷ್ಠ ಸಾಹಿತಿಗಳು ಭಾಗವಹಿಸುತ್ತಿದ್ದುದರಿಂದ ಅದು ಕನ್ನಡದ ಪಾಲಿಗೆ ಉತ್ಸವವಾಗತೊಡಗಿತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಗಮನಿಸಿದವರಿಗೆ ಅವು ಹೇಗೆ ಜಾತ್ರೆಗಳಾಗತೊಡಗಿದವೋ ಹಾಗೆಯೇ ಸಾಹಿತ್ಯ ಸಮ್ಮೇಳನಗಳೂ ಜಾತ್ರೆಗಳಾಗಿ ಪರಿವರ್ತನೆ ಹೊಂದಿದ್ದರೆ ಅಚ್ಚರಿಯಿಲ್ಲ. ಸಾಹಿತ್ಯ ಮತ್ತು ಅದರ ಪರಿಕರಗಳು ವ್ಯವಸ್ಥೆಯ, ಸಮಾಜದ ಅಂಗಗಳು ತಾನೇ?

ಸಮ್ಮೇಳನಗಳಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸರಕಾರಿ ಅಧಿಕಾರಿಗಳು ಸಕ್ರಿಯ (?) ಪಾತ್ರವನ್ನು ವಹಿಸುವುದು (ನೆರೆಯ ಮಹಾರಾಷ್ಟ್ರದಲ್ಲಿಲ್ಲದ) ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ವೈಶಿಷ್ಟ್ಯಗಳಲ್ಲೊಂದು. ಇಲ್ಲೆಲ್ಲ ಕನ್ನಡದ ಮೇಲಣ ಪ್ರೀತಿಗಿಂತ ಸರಕಾರದ ಅನುದಾನ, ಸಾಹಿತ್ಯ ಪ್ರೀತಿಗಿಂತಲೂ ವೇದಿಕೆಯ ಪ್ರದರ್ಶನ, ಹಣಕಾಸಿನ ಮೇಲಣ ಮೂರ್ತ ಅಧಿಕಾರ ಇವು ಪ್ರವೃತ್ತವಾಗುತ್ತವೆ. ಈಗೀಗಿನ ಸಮ್ಮೇಳನಗಳಲ್ಲಿ ಪೊಲೀಸರಿಗೇನು ಕೆಲಸ ಎಂದು ಭಾವಿಸಬೇಡಿ. ವೇದಿಕೆಗೇರುವ ನೂಕುನುಗ್ಗಲು, ಸಾಹಿತ್ಯೇತರ ಚರ್ಚೆ, ಜಗಳ ಇವುಗಳು ಅವರು ಲಾಠಿ ಪ್ರಹಾರ ಮಾಡುವ ಹಂತಕ್ಕೂ ಹೋಗುತ್ತವೆ. ನಿಜವಾದ ಬಲವಿರುವುದು ಲೇಖನಿಗಲ್ಲ, ಅಧಿಕಾರಕ್ಕೆ, ಲಾಠಿಗೆ. ಸಮ್ಮೇಳನದ ಅವಾಂತರಗಳನ್ನು, ಗೊಂದಲಗಳನ್ನು ವಿವರಿಸುವ ಅಸಂಖ್ಯ ಲೇಖನಗಳು ಬಂದಿವೆ. ಅವನ್ನು ಒಟ್ಟಾಗಿ ಒಂದು ವಿಶೇಷ ಸಂಚಿಕೆಯಾಗಿಸಬಹುದು.

ಮಹೇಶ್ ಜೋಶಿಯವರು ಅಧ್ಯಕ್ಷರಾಗಿ ಆಯ್ಕೆಯಾದ ಈ ಬಾರಿಯ ಅಧ್ಯಕ್ಷರ ಚುನಾವಣೆ ನಡೆಯುವ ಮೊದಲೇ ಸಂಘಟಿತವಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಮತದಾರರು ಒಳಗೊಂಡರು. ಮಹೇಶ್‌ಜೋಶಿಯವರು ಅಧ್ಯಕ್ಷರಾಗುವುದಕ್ಕೆ ಏನು ಅರ್ಹತೆಯಿತ್ತೋ ಗೊತ್ತಿಲ್ಲ; ಅದು ಅನಪೇಕ್ಷಿತ. ಸಾಹಿತಿಗಳೇ ಅಧ್ಯಕ್ಷರಾಗಬೇಕೆಂದಿಲ್ಲ; ಸಾಹಿತ್ಯ ಸಂಘಟಕರೂ ಅಧ್ಯಕ್ಷರಾಗಬಹುದು. ಪುನರೂರು ಸಾಹಿತ್ಯದಿಂದ ಮೈಲುದ್ದ ದೂರವಿದ್ದರೂ ಸಂಘಟಕರೆಂದು ಹೆಸರು ಮಾಡಿದವರು. ಆದ್ದರಿಂದ ಸಾಹಿತ್ಯ ಪರಿಷತ್ತು ಎಂದರೆ ಕನ್ನಡ ಮತ್ತು ಸಾಹಿತ್ಯ ಇವುಗಳನ್ನು ಸಂಘಟಿಸುವ ಕೊಂಡಿಯಾಗಿರಬೇಕೆಂದು ಬಯಸಿದರೆ ತಪ್ಪಿಲ್ಲ. ಆದರೆ ಅವರು ಒಂದು ಭದ್ರ ಮತೀಯ ಸಂಘಟನೆಯ ಸಿದ್ಧಾಂತಕ್ಕೆ ಒಗ್ಗಿಹೋದ, ಒಪ್ಪಿಕೊಂಡ ಆಯ್ಕೆಯಾಗಿತ್ತೆಂಬುದಂತೂ ಸತ್ಯ. ಆದ್ದರಿಂದ ಅವರ ಅವಧಿಯಲ್ಲಿ ಏನೇ ನಡೆದರೂ ಅದು ಹೀಗೇ ಇರಬಹುದೆಂದು ಊಹಿಸಬಹುದಾಗಿತ್ತು. ವಿಶೇಷವೆಂದರೆ ಪರಿಷತ್ತಿನ ಸಂಘಟನೆಯಲ್ಲಿ ಸಾಹಿತಿಗಳು ಕಡಿಮೆ; ಸಾಮಾಜಿಕ ಕಾರ್ಯಕರ್ತರೆಂದೋ ಸಂಘಟಕರೆಂದೋ ಕರೆಸಿಕೊಳ್ಳುವ, ಪ್ರಚಾರ ಬಯಸುವ, ಸಕ್ರಿಯ ರಾಜಕಾರಣದಲ್ಲಿಲ್ಲದಿದ್ದರೂ ನಾಯಕರೊಂದಿಗೆ ಅವತಾರವೆತ್ತಬಯಸುವ ರಾಜಕೀಯ ಮಹತ್ವಾಕಾಂಕ್ಷೆಯಿರುವ ವ್ಯಕ್ತಿಗಳು ಮತ್ತು ಹೇಗೂ ಸರಿ, ಹೇಗಾದರೂ ಸರಿ, ಸಂಸ್ಥೆಯಲ್ಲಿರುವವರು, ವೇದಿಕೆಯ ಅವಕಾಶಕ್ಕೆ ಕಾಯುವವರು ಮತ್ತು ಕೆಲವು ಮುಗ್ಧಾತಿಮುಗ್ಧ ಸ್ಥಳೀಯ ಪ್ರತಿಷ್ಠಿತರು ಹೆಚ್ಚು. ಅಂತಹ ಹೆಚ್ಚುಕಡಿಮೆ ಎಲ್ಲ ಪಕ್ಷದವರೂ ಒಂದೇ ಸಂಘಟನೆಯಲ್ಲಿ ಸೇರಿದ್ದರೆ ಅದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತ್ರ ಇರಬಹುದೇನೋ?

ಈ ಸಮ್ಮೇಳನದ ಲಕ್ಷಣಗಳು ಅನಿರೀಕ್ಷಿತವೇನೂ ಅಲ್ಲ. ದೊಡ್ಡರಂಗೇಗೌಡರು ಈ ಬಾರಿಯ ಸಮ್ಮೇಳನಾಧ್ಯಕ್ಷರು. ಮೋದಿಯ ಕುರಿತು ಪದ್ಯ ಬರೆದಾಗ ನಮಗೆ ಅವರು ಒಂದು ವರ್ಗವನ್ನಲ್ಲ, ಒಂದು ಪಕ್ಷವನ್ನು, ಒಂದು ಭಯಾನಕ ಸಿದ್ಧಾಂತವನ್ನು ಪ್ರತಿಪಾದಿಸುವವರು ಎಂದೆನಿಸಲಿಲ್ಲ. ಅವರಿಗೆ ಪದ್ಮ ಪ್ರಶಸ್ತಿ ಬಂದಾಗ ಅದು ಅವರ ಸಾಹಿತ್ಯ ಸಂಬಂಧಕ್ಕಿಂತ ಹೆಚ್ಚಾಗಿ ರಾಜಕೀಯ ಒಲವಿಗಾಗಿ ಸಿಕ್ಕಿತೆಂದು ಅನ್ನಿಸಲಿಲ್ಲ. ನಮ್ಮ ಅನೇಕ ಬೋಧಕ ಚಿಂತಕರು, ಸಾಹಿತಿಗಳು, ವಿದ್ವಾಂಸರು, ಕೆಲವು ಕಾಲ ನೆಲಕ್ಕಿಳಿದದ್ದೇ ಇಲ್ಲ. ಕಾಮಿಕ್ಸ್ ಹೀರೊ ಟಾರ್ಜನ್ ಮರದಿಂದ ಮರಕ್ಕೆ ಜಿಗಿದಂತೆ ಅಕಾಡಮಿಯಿಂದ ಅಕಾಡಮಿಗೆ, ಪ್ರಾಧಿಕಾರದಿಂದ ಪ್ರಾಧಿಕಾರಕ್ಕೆ, ವಿಶ್ವವಿದ್ಯಾನಿಲಯದಿಂದ ವಿಶ್ವವಿದ್ಯಾನಿಲಯಕ್ಕೆ, ಸೆಮಿನಾರಿನಿಂದ ಸೆಮಿನಾರಿಗೆ, ಹೀಗೆ ಹಲವು ಕಾಲ ಪಾಠಮಾಡುವುದನ್ನೇ ಮರೆತು ಆಯ್ಕೆಯಾದ ಉದಾಹರಣೆಗಳಿವೆ. ಸೈದ್ಧಾಂತಿಕ ರಾಜಕಾರಣದ ಭಾಗವಾಗಿ ಸಾಹಿತ್ಯ ಬೆಳೆದುಬಂದಂತೆ ಇವೆಲ್ಲ ಸಹಜ. ಇವೆಲ್ಲ ಊರ್ವಶಿಯ ಶಾಪದ ಇನ್ನೊಂದು ರೂಪ. ಇಂತಹವರು ದ್ಯೂತದಲ್ಲಿ ಸೋತವರೆಂದು ಭಾವಿಸಿಕೊಂಡು ಅಜ್ಞಾತವಾಸ ಮುಗಿಯುವವರೆಗೆ ಕಾಯುವುದು ಒಳ್ಳೆಯದು.

ಮಹೇಶ್ ಜೋಶಿಯವರು ಹಿಂದಿನ ಎಲ್ಲ ಅಧ್ಯಕ್ಷರಿಗಿಂತಲೂ ಮುಂದುವರಿದಿದ್ದಾರೆ. ರಿಲೇ ಓಟದ ವ್ಯವಸ್ಥೆಯಲ್ಲಿ ಇದು ಸಹಜ. ನಮ್ಮ ಬಹಳಷ್ಟು-ಈಗ ಅವರನ್ನು ಸಮ್ಮೇಳನ ಕಾರಣಕ್ಕೆ ವಿರೋಧಿಸುವವರು ಈ ಬಾರಿ ಬೊಳುವಾರರನ್ನೋ ಅಬ್ದುಲ್ ರಶೀದರನ್ನೋ ಮುಖ್ಯ ಗೋಷ್ಠಿಗಳ ಅಧ್ಯಕ್ಷತೆಗೋ, ಇತರ ಮುಖ್ಯ ಭೂಮಿಕೆಯಲ್ಲೋ ಸೇರಿಸಿಕೊಂಡಿದ್ದರೆ ಅದು ಮೀಸಲಾತಿಯನ್ನು ಪೂರೈಸುತ್ತಿತ್ತೆಂದು ಭಾವಿಸುವವರೇ. ಆದರೆ ಮುಸ್ಲಿಮ್ ಲೇಖಕರು ಎಂಬ ವಿಂಗಡಣೆ, ವರ್ಗೀಕರಣ, ಪ್ರತ್ಯೇಕತೆಯೇ ತಪ್ಪೆಂದು ನನ್ನ ಅಭಿಪ್ರಾಯ. ಅವರು ಕನ್ನಡ ಲೇಖಕರು ಮತ್ತು ಪ್ರಾತಿನಿಧ್ಯಕ್ಕೆ ಅರ್ಹರಾದವರೆಂದು ವಾದಿಸಬಹುದಿತ್ತೇನೋ? ಆದರೆ ಸಮಸ್ಯೆ ಇದಲ್ಲ. ಸಮ್ಮೇಳನಪೂರ್ವದ ಈ ಅವಧಿಯ ಪರಿಷತ್ತಿನ ಲಕ್ಷಣಗಳಲ್ಲೇ ಅವರ ಮತೀಯ, ಮತಾಂಧ ಕಲ್ಪನೆ ಮಾತ್ರವಲ್ಲ, ಬಲಪಂಥೀಯ ಧೋರಣೆಗೆ ವಿರುದ್ಧವಾದ ಇತರ ಕೋಮಿನ ಮುಖ್ಯವಾಗಿ ಹಿಂದೂ ಮತ್ತು ಕ್ರೈಸ್ತ ಲೇಖಕರಿಗೂ ಸಮ್ಮೇಳನದಲ್ಲಿ ಅವಕಾಶವಿಲ್ಲವೆಂಬುದು ಸ್ಪಷ್ಟವಿತ್ತು. ಈ ತಾರತಮ್ಯ ಅವರ ಧೋರಣೆಗೆ ತಕ್ಕುದೇ ಆಗಿದೆ. ಆದ್ದರಿಂದ ಇಂತಹ ಸಮ್ಮೇಳನದಲ್ಲಿ ಸಮತೋಲವನ್ನಾಗಲೀ, ಸಂವೇದನೆಯನ್ನಾಗಲೀ ಹುಡುಕುವುದೇ ಮೂರ್ಖತನ. ಒಂದು ವೇಳೆ ಈ ಸಮ್ಮೇಳನವಿಲ್ಲದಿದ್ದರೆ ಪರ್ಯಾಯ ಜನ ಸಮ್ಮೇಳನವಿರುತ್ತಿತ್ತೇ? ಮಹೇಶ್ ಜೋಶಿಯವರು ಅಧ್ಯಕ್ಷರಾದಾಗಿನಿಂದ ಹಿಂದಿ ಹೇರಿಕೆಯಾಗಲಿ, ಇನ್ನಿತರ ನಾಡು-ನುಡಿಯ ಹಿತಕ್ಕೆ ಧಕ್ಕೆ ಬಂದಾಗ ಅವರು ವರ್ತಿಸಿದ ರೀತಿಯನ್ನು ಗಮನಿಸಿದರೆ, ಈಗ ನಡೆದಿರುವುದು ಅನಿರೀಕ್ಷಿತವೇನೂ ಅಲ್ಲ. ಹೀಗೆ ಪ್ರತಿಭಟನೆ ಮಾಡುವವರಿಗೆ ಸಮ್ಮೇಳನದಲ್ಲಿ ಅವಕಾಶ ಕೊಟ್ಟಿದ್ದರೆ ಪ್ರಾಯಃ ಅವರು ಭಾಗವಹಿಸುತ್ತಿರಲಿಲ್ಲವೇನೋ? ಪುರುಷೋತ್ತಮ ಬಿಳಿಮಲೆಯವರು ರಹಮತ್ ತರೀಕೆರೆ ಮತ್ತಿತರರನ್ನು ಹೆಸರಿಸಿ ಈ ಮಂದಿ ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂದು ಹೇಳಿದ್ದನ್ನು ಗಮನಿಸಿದರೆ, ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಒಟ್ಟಾರೆ ವ್ಯವಸ್ಥೆಯ ಬಗ್ಗೆ ಸಂಶಯವಿದ್ದಂತಿಲ್ಲ ಮತ್ತು ಅದರ ಅಧಿಕೃತತೆಯನ್ನು ಹಾಗೂ ಅದು ನೀಡಬಹುದಾದ ಗೌರವವನ್ನು ಎಲ್ಲರೂ ನಿರೀಕ್ಷಿಸಬೇಕೆಂದು ಯೋಚಿಸಿದಂತೆ ಕಾಣುತ್ತದೆ.

ದೇವನೂರು ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ತಿರಸ್ಕರಿಸಿದ್ದರ ಹಿಂದಿದ್ದ ಕಾಳಜಿ ನಮ್ಮ ಇತರ ಸಾಹಿತಿಗಳಿಗೇಕಿಲ್ಲ? ಹಿಂದೆ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ವಿರೋಧಪಕ್ಷದ ಪ್ರಮುಖರು ಯಾವುದಾದರೂ ಹಗರಣವನ್ನು ಪ್ರಶ್ನಿಸಿದ ತಕ್ಷಣ ಅವರನ್ನು ಯಾವುದಾದರೂ ನಿಯೋಗದಲ್ಲಿ ಸೇರಿಸಿ ವಿದೇಶಕ್ಕೆ ಕಳುಹಿಸುತ್ತಿದ್ದರಂತೆ. ಅಲ್ಲಿಗೆ ಅವರ ಪ್ರಶ್ನೆ ಮರೆತುಹೋಗುತ್ತಿತ್ತಂತೆ. ನಮ್ಮ ಸಾಹಿತ್ಯ ವ್ಯವಸ್ಥೆ ಈ ಹಾದಿಯಲ್ಲಿರುವಂತೆ ಕಾಣಿಸುತ್ತದೆ. ಈಗ ಇಂಥದ್ದೊಂದು ಸಮ್ಮೇಳನದ ವ್ಯವಸ್ಥೆಯಾದಾಗ ಅದಕ್ಕೆ ಪರ್ಯಾಯ ಸಮ್ಮೇಳನವನ್ನು ಮಾಡುವುದೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತತೆಯನ್ನು ಒಪ್ಪಿಕೊಂಡು ಗೌರವಿಸಿದಂತೆ ಮತ್ತು ಅಧಿಕಾರ ಮಾತ್ರ ನಮಗೆ ಸಿಕ್ಕಬೇಕಿತ್ತೆಂದು ತಿಳಿದಂತೆಯೇ ಸರಿ. ನಾವು ಕ್ರಿಯಾಶೀಲರಾಗಬೇಕೇ ವಿನಾ ಪ್ರತಿಕ್ರಿಯಾಶೂರರಾಗಬೇಕಾಗಿಲ್ಲ. ಒಂದು ಕಾನೂನು ಹೇರಿದರೆ, ಇಲ್ಲವೇ ಜಾರಿಯಾದರೆ ಅದರಿಂದ ಪಾರಾಗಲು ಪ್ರತಿಭಟನೆ ಬೇಕು. ಸಾಹಿತ್ಯ ಸಮ್ಮೇಳನವು ಎನ್‌ಆರ್‌ಸಿ, ಸಿಎಎಯಂತಹ ಕಾನೂನಲ್ಲ. ಈಗ ನಡೆಯುತ್ತಿರುವುದು ಮಹಾಯುದ್ಧಗಳಲ್ಲ. ಒಳಜಗಳಗಳು. ಪ್ರತಿಷ್ಠೆಯ ವ್ಯರ್ಥ ಕದನಗಳು. ಆಮಂತ್ರಣ ಪತ್ರಿಕೆ ಮುದ್ರಣವಾದ್ದರಿಂದ ಅದನ್ನು ತಿದ್ದುವಂತಿಲ್ಲ. ಮಾಧ್ಯಮಗಳಿನ್ನೂ ಹಣಾಹಣಿ, ಸಮರ ಎಂದೆಲ್ಲ ಘೋಷಿಸುವ ಹಂತ ತಲುಪಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಈ ಸಮ್ಮೇಳನವನ್ನು ಎಂಥಾ ಮರುಳಯ್ಯ, ಇದು ಎಂಥಾ ಮರುಳು... ಎಂದು ದನಿಗೂಡಿಸಿ ಹಾಡುವುದರ ಬದಲು ಇಷ್ಟು ಎಚ್ಚರ ತಪ್ಪಿದರೆ ಬುದ್ಧಿವಂತರ ಬುದ್ಧಿಪರೀಕ್ಷೆ ಮಾಡಬೇಕಷ್ಟೇ.
ಸಾಹಿತ್ಯದ ಧೂಳು ಕಣ್ಣಿಗೆ ಬೀಳದಿರಲಿ.

Similar News