ಉತ್ತರಾಖಂಡದಲ್ಲಿ 4 ಸಾವಿರ ಮನೆಗಳ ತೆರವು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಸಾವಿರಾರು ಜನರನ್ನು ರಾತ್ರೋರಾತ್ರಿ ತೆರವುಗೊಳಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ

Update: 2023-01-05 08:12 GMT

ಹೊಸದಿಲ್ಲಿ: ಉತ್ತರಾಖಂಡದ  ಹಲ್ದ್ವಾನಿಯ ರೈಲ್ವೆ ಭೂಮಿಯಲ್ಲಿರುವ  4 ಸಾವಿರ ಮನೆಗಳನ್ನು ತೆರವುಗೊಳಿಸುವ ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ  ಇಂದು ತಡೆ ನೀಡಿರುವ ಸುಪ್ರೀಂಕೋರ್ಟ್ ಸಾವಿರಾರು ಜನರನ್ನು ರಾತ್ರೋರಾತ್ರಿ ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಾವಿರಾರು ಮನೆಗಳನ್ನು ತೆರವುಗೊಳಿಸಬೇಕೆಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು   ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಅಬ್ದುಲ್ ನಝೀರ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದು,  ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಅರ್ಜಿದಾರರು ಹಲ್ದ್ವಾನಿ ಜಿಲ್ಲೆಯ ಮೊಹಲ್ಲಾ ನಾಯ್ ಬಸ್ತಿಯಲ್ಲಿ 70 ವರ್ಷಗಳಿಗೂ ಹೆಚ್ಚು ಕಾಲ ಕಾನೂನುಬದ್ಧ ನಿವಾಸಿಗಳಾಗಿದ್ದ ಬಡವರು ಎಂದು ಅರ್ಜಿಯಲ್ಲಿ  ಎತ್ತಿ ತೋರಿಸಿದೆ.

ಅರ್ಜಿದಾರರ ಪ್ರಕಾರ, ಉತ್ತರಾಖಂಡ ಹೈಕೋರ್ಟ್ 4,000 ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುವ 20,000 ಕ್ಕೂ ಹೆಚ್ಚು ಜನರನ್ನು ಹೊರಹಾಕಲು ಆದೇಶ ನೀಡಿತು.

ಸ್ಥಳೀಯ ನಿವಾಸಿಗಳ ಹೆಸರನ್ನು ಮನೆ ತೆರಿಗೆ ರಿಜಿಸ್ಟರ್‌ನ ಪುರಸಭೆಯ ದಾಖಲೆಗಳಲ್ಲಿ ನಮೂದಿಸಲಾಗಿದೆ ಮತ್ತು ಅವರು ಹಲವು ವರ್ಷಗಳಿಂದ ನಿಯಮಿತವಾಗಿ ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಇದಲ್ಲದೆ, ಈ ಪ್ರದೇಶದಲ್ಲಿ ಐದು ಸರಕಾರಿ ಶಾಲೆಗಳು, ಒಂದು ಆಸ್ಪತ್ರೆ ಹಾಗೂ ಎರಡು ಓವರ್‌ಹೆಡ್ ನೀರಿನ ಟ್ಯಾಂಕ್‌ಗಳಿವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

Similar News