ವಿಮಾನದಲ್ಲಿ ಸಹ-ಪ್ರಯಾಣಿಕೆಯ ಬ್ಲಾಂಕೆಟ್ ಮೇಲೆ ಮೂತ್ರ ವಿಸರ್ಜಿಸಿದ ಪುರುಷ ಪ್ರಯಾಣಿಕ

ಇನ್ನೊಂದು ಆಘಾತಕಾರಿ ಪ್ರಕರಣ ಬೆಳಕಿಗೆ

Update: 2023-01-05 12:39 GMT

ಹೊಸದಿಲ್ಲಿ: ನವೆಂಬರ್ 26 ರಂದು ನ್ಯೂಯಾರ್ಕ್ –ದಿಲ್ಲಿ ನಡುವೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ಅಮಲಿನಲ್ಲಿದ್ದ ಬಿಸಿನೆಸ್ ಕ್ಲಾಸ್ ಪ್ರಯಾಣಿಕನೊಬ್ಬ ಸಹ-ಪ್ರಯಾಣಿಕೆಯ ಮೇಲೆ ಮೂತ್ರವಿಸರ್ಜನೆಗೈದ ಆಘಾತಕಾರಿ ಘಟನೆ ಬೆಳಕಿಗೆ ಬಂದ ಹತ್ತು ದಿನಗಳಲ್ಲಿ ಇಂತಹುದೇ ಇನ್ನೊಂದು ಘಟನೆ ವರದಿಯಾಗಿದೆ. 

ಮದ್ಯದ ನಶೆಯಲ್ಲಿದ್ದ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕೆಯ ಬ್ಲಾಂಕೆಟ್ ಮೇಲೆ ಮೂತ್ರವಿಸರ್ಜನೆಗೈದ ಈ ಘಟನೆ ಪ್ಯಾರಿಸ್- ದಿಲ್ಲಿ ವಿಮಾನದಲ್ಲಿ ನಡೆದಿದೆ. ಆದರೆ  ತಪ್ಪಿತಸ್ಥ ಪ್ರಯಾಣಿಕ ಲಿಖಿತವಾಗಿ ಕ್ಷಮೆಯಾಚಿಸಿದ ನಂತರ ಈ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಡಿಸೆಂಬರ್ 6 ರಂದು ಏರ್ ಇಂಡಿಯಾ ವಿಮಾನದಲ್ಲಿ ನಡೆದಿದ್ದು ಈ ವಿಚಾರವನ್ನು ವಿಮಾನದ ಪೈಲಟ್ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ಗೆ ತಿಳಿಸಿದ್ದರು. ನಂತರ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಆ ದಿನ ಬೆಳಿಗ್ಗೆ 9.40ಕ್ಕೆ ವಿಮಾನ ಭೂಸ್ಪರ್ಶ ಮಾಡಿತ್ತು, ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಹಾಗೂ ವಿಮಾನ ಪರಿಚಾರಿಕೆಯರ ಮಾತನ್ನು ಕೇಳಲಿಲ್ಲ ಹಾಗೂ ನಂತರ ಮಹಿಳಾ ಪ್ರಯಾಣಿಕೆಯ ಬ್ಲಾಂಕೆಟ್ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂದು ಹೇಳಲಾಗಿದೆ.

ಸಿಐಎಸ್ಎಫ್ ಸಿಬ್ಬಂದಿ ಆತನನ್ನು ತಕ್ಷಣ ವಶಪಡಿಸಿಕೊಂಡರೂ ನಂತರ ತಪ್ಪಿತಸ್ಥ ಮತ್ತು ಸಂತ್ರಸ್ತ ಪ್ರಯಾಣಿಕರಿಬ್ಬರೂ ಪರಸ್ಪರ ಒಡಂಬಡಿಕೆಗೆ ಬಂದು ಆತ ಲಿಖಿತ ಕ್ಷಮಾಪಣೆ ಸಲ್ಲಿಸಿದ ನಂತರ  ಯಾವುದೇ ದೂರು ದಾಖಲಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರಂಭದಲ್ಲಿ ಸಂತ್ರಸ್ತೆ ಲಿಖಿತ ದೂರು ಸಲ್ಲಿಸಿದರೂ ಪೊಲೀಸ್ ದೂರು ಸಲ್ಲಿಸಲು ನಿರಾಕರಿಸಿದ್ದರು.

Similar News