ಭಟ್ಕಳ: ಕಡಲ ತೀರಗಳಲ್ಲಿ ಅಕ್ರಮ ಬೆಳಕು ಮೀನುಗಾರಿಕೆ ಆರೋಪ; ನಾಡದೋಣಿ ಮೀನುಗಾರರಿಂದ ಆಕ್ರೋಶ
ಭಟ್ಕಳ: ತಾಲ್ಲೂಕಿನ ವ್ಯಾಪ್ತಿಯ ಕಡಲ ತೀರಗಳಲ್ಲಿ ಅಕ್ರಮವಾಗಿ ಕೆಲವು ಭಾಗದ ಮೀನುಗಾರರು ಬೆಳಕು ಮೀನುಗಾರಿಕೆ (Light fishing) ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,ಇದಕ್ಕೆ ತೆಂಗಿನಗುoಡಿ ಬಂದರಿನಲ್ಲಿ ನಾಡದೋಣಿ ಮೀನುಗಾರರು ಲೈಟ್ ಫಿಶಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಳಕು ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ ಕೂಡ ಕೆಲವು ಮೀನುಗಾರರು ಅಕ್ರಮವಾಗಿ ಬೆಳಕು ಮೀನುಗಾರಿಕೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಭಟ್ಕಳ ತಾಲೂಕು ವ್ಯಾಪ್ತಿಯ ಕಡಲಿನಲ್ಲಿ ಮೀನುಗಾರರು ಬೆಳಕು ಬಿಟ್ಟು ಮೀನುಗಾರಿಕೆ ನಡೆಸಿದ್ದು, ಇದನ್ನು ಸ್ಥಳೀಯ ಮೀನುಗಾರರು ವಿಡಿಯೋ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ಹಾಗೂ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವವರ ನಡುವೆ ಕಡಲ ತೀರದಲ್ಲೇ ಕೆಲ ಕಾಲ ವಾಗ್ವಾದ ನಡೆದಿದ್ದು,ಲೈಟ್ ಫಿಶಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.
ರಾತ್ರಿ ವೇಳೆ ಬೋಟಿನಲ್ಲಿ ಅಳವಡಿಸಿರುವ ಜನರೇಟರ್ ಮೂಲಕ ಪ್ರಖರವಾದ ಬೆಳಕಿನ ಬಲ್ಬಗಳನ್ನು ಸಮುದ್ರದತ್ತ ಉರಿಸಿದಾಗ ಅದರ ಬೆಳಕಿಗೆ ಆಕರ್ಷಿತವಾಗಿ ಮೀನುಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಬಲೆ ಹಾಕಿ ಮೀನುಗಳನ್ನು ಹಿಡಿಯಲಾಗುತ್ತದೆ. ಆದರೆ ಇಂತಹ ಮೀನುಗಾರಿಕೆಯಿಂದ ಸಣ್ಣ ಸಣ್ಣ ಮೀನು ಮರಿಗಳೂ ಬಲೆಗೆ ಬಿದ್ದು ಸಾವನ್ನಪ್ಪುವುದರಿಂದ ಮೀನು ಸಂತತಿಯ ಮೇಲೆ ಭಾರೀ ಹೊಡೆತ ಬೀಳುತ್ತದೆ ಎಂದು ನಾಡದೋಣಿ ಮೀನುಗಾರರು ಆರೋಪಿಸಿದ್ದಾರೆ.
ಇಂತಹವರ ಮೇಲೆ ನಿಗಾ ಇರಿಸಬೇಕಾದ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯವಹಿಸುತ್ತಿವೆ. ಹೀಗಾಗಿ ಅವೈಜ್ಞಾನಿಕ ಮೀನುಗಾರಿಕೆಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಸುವುದನ್ನೇ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರು.