ಟ್ವಿಟರ್ ಹ್ಯಾಕ್, 20 ಕೋಟಿ ಬಳಕೆದಾರರ ಇ-ಮೇಲ್ ವಿಳಾಸ ಸೋರಿಕೆ: ವರದಿ

Update: 2023-01-06 04:27 GMT

ನ್ಯೂಯಾರ್ಕ್: ಸುಮಾರು 20 ಕೋಟಿ ಟ್ವಿಟರ್ ಬಳಕೆದಾರರ ಇ-ಮೇಲ್ ವಿಳಾಸಗಳನ್ನು ಕದ್ದಿರುವ ಹ್ಯಾಕರ್‌ಗಳು ಇವುಗಳನ್ನು ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ಬಹಿರಂಗಪಡಿಸಿದ್ದಾರೆ.

"ದುರದೃಷ್ಟವಶಾತ್ ಈ ಉಲ್ಲಂಘನೆಯು ದೊಡ್ಡ ಪ್ರಮಾಣದ ಹ್ಯಾಕಿಂಗ್‌ಗೆ, ನಿಗದಿತ ಫಿಶಿಂಗ್ ಮತ್ತು ಡಾಕ್ಸಿಂಗ್‌ಗೆ ಕಾರಣವಾಗಲಿದೆ ಎಂದು ಇಸ್ರೇಲ್‌ನ ಸೈಬರ್ ಭದ್ರತೆ ನಿಗಾ ಸಂಸ್ಥೆಯಾದ ಹಡ್ಸನ್ ರಾಕ್‌ನ ಸಹ ಸಂಸ್ಥಾಪಕ ಅಲನ್ ಗಾಲ್ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ. "ಇದು ನಾನು ನೋಡಿದ ಸೋರಿಕೆಗಳಲ್ಲಿ ಅತ್ಯಂತ ಮಹತ್ವದ ಸೋರಿಕೆ" ಎಂದು ಬಣ್ಣಿಸಿದ್ದಾರೆ.

ಡಿಸೆಂಬರ್ 24ರಂದು ಮೊದಲ ಬಾರಿಗೆ ಗಾಲ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಟ್ವಿಟ್ಟರ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಈ ಹ್ಯಾಕಿಂಗ್ ಬಗ್ಗೆ ಇದುವರೆಗೆ ಯಾವುದೇ ವಿಚಾರಣೆಗೆ ಉತ್ತರಿಸಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಅಥವಾ ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ.

ಫೋರಂನಲ್ಲಿ ಬಹಿರಂಗಪಡಿಸಿರುವ ದತ್ತಾಂಶಗಳು ಅಧಿಕೃತವಾಗಿ ಟ್ವಿಟ್ಟರ್‌ನಿಂದ ಹ್ಯಾಕ್ ಮಾಡಿರುವ ಅಂಶಗಳೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ರಾಯ್ಟರ್ಸ್‌ ಹೇಳಿದೆ. ಡಾಟಾ ಪೋಸ್ಟ್ ಮಾಡಿರುವ ಹ್ಯಾಕರ್ ಫೋರಂನ ಸ್ಕ್ರೀನ್‌ಶಾಟ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Similar News