ಝುಬೇರ್ ವಿರುದ್ಧ ಯಾವುದೇ ಅಪರಾಧಿ ನಡವಳಿಕೆಗಳು ಪತ್ತೆಯಾಗಿಲ್ಲ: ಹೈಕೋರ್ಟ್‌ಗೆ ದಿಲ್ಲಿ ಪೊಲೀಸ್‌ ಮಾಹಿತಿ

Update: 2023-01-06 06:26 GMT

ಹೊಸದಿಲ್ಲಿ: ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ, "ಇಲ್ಲಿಯವರೆಗೆ ಆರೋಪಿ ಝುಬೇರ್ ವಿರುದ್ಧ ಯಾವುದೇ ಬಗೆಯ ಅಪರಾಧಿ ನಡವಳಿಕೆಗಳು ಕಂಡು ಬಂದಿಲ್ಲ. ಹೀಗಾಗಿ ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ" ಎಂದು ಗುರುವಾರ ದಿಲ್ಲಿ ಪೊಲೀಸರ ಪರವಾಗಿ ವಕೀಲೆ ನಂದಿತಾ ರಾವ್, ದಿಲ್ಲಿ ಹೈಕೋರ್ಟಿನ ಏಕಸದಸ್ಯ ಪೀಠಕ್ಕೆ ಮಾಹಿತಿ ನೀಡಿದ್ದಾರೆ. 

ಆಗಸ್ಟ್ 6, 2020ರಂದು ದಿಲ್ಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಾಥಮಿಕ ಮಾಹಿತಿ ವರದಿಯನ್ನು ರದ್ದುಗೊಳಿಸುವಂತೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ (Alt News co-founder Mohammad Zubair) ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾ. ಅನೂಪ್ ಜೈರಾಮ್ ಭಂಭಾನಿ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಈ ಕುರಿತು ಮತ್ತಷ್ಟು ವಿಚಾರಣೆ ನಡೆಸುವ ಮುನ್ನ, 2020ರಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಝುಬೇರ್ ಮಾಡಿದ್ದ ಟ್ವೀಟ್ ವಿರುದ್ಧ ದಾಖಲಿಸಲಾಗಿದ್ದ ಪ್ರಾಥಮಿಕ ಮಾಹಿತಿ ವರದಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ದಾಖಲೆ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.

ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು, ಝುಬೇರ್ ಟ್ವೀಟ್ ಮೂಲಕ ಬಾಲಕಿಯೊಬ್ಬಳಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರನ್ನು ಆಧರಿಸಿ ದಿಲ್ಲಿ ಸೈಬರ್ ಘಟಕ ಪೊಲೀಸರು ಪೋಕ್ಸೊ ಕಾಯ್ದೆಯಡಿ ಝುಬೇರ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದರು.

ಈ ಕ್ರಮವನ್ನು ಪ್ರಶ್ನಿಸಿ, ತನ್ನ ವಿರುದ್ಧದ ಪ್ರಾಥಮಿಕ ಮಾಹಿತಿ ವರದಿಯನ್ನು ರದ್ದುಗೊಳಿಸಬೇಕು ಮತ್ತು ದೂರದಾರ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಝುಬೇರ್ ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಆಗಸ್ಟ್ 6, 2020ರಂದು ಅಪ್ರಾಪ್ತ ಬಾಲಕಿಯ ಮುಖವನ್ನು ಮಸುಕುಗೊಳಿಸಿದ ಚಿತ್ರವೊಂದನ್ನು ಝುಬೇರ್ ಟ್ವೀಟ್ ಮಾಡಿದ್ದರು. ಆ ಚಿತ್ರದಲ್ಲಿ ಅವರು ತನ್ನ ಸಂಬಂಧಿ ಬಾಲಕಿಯೊಂದಿಗೆ ಇರುವುದು ಕಂಡು ಬಂದಿದ್ದರಿಂದ ಅವರ ನಡವಳಿಕೆ ಪ್ರಶ್ನೆಗೊಳಗಾಗಿತ್ತು.

ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಪರವಾಗಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಈ ಪ್ರಕರಣದ ಕುರಿತಂತೆ ತಾವು ಮತ್ತಷ್ಟು ನಿರ್ದೇಶನಗಳನ್ನು ಪಡೆಯುವುದಾಗಿ ಹೈಕೋರ್ಟ್‌ಗೆ ತಿಳಿಸಿದರು. ಇದೇ ವೇಳೆ, ಝುಬೇರ್ ಅವರು ಈ ಪ್ರಕರಣವನ್ನು ಮುಂದುವರಿಸಲು ಬಯಸುತ್ತಾರೊ, ಇಲ್ಲವೊ ಎಂಬ ಬಗ್ಗೆ ಅವರಿಂದ ನಿರ್ದೇಶನ ಪಡೆಯಿರಿ ಎಂದು ಝುಬೇರ್ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿತು.

ಪ್ರಕರಣದ ಮರು ವಿಚಾರಣೆಗೆ ಮಾರ್ಚ್ 2ಕ್ಕೆ ನಿಗದಿಯಾಗಿದೆ.

ಇದನ್ನೂ ಓದಿ: ತನ್ನನ್ನು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ತೆಗೆಯುವ ಮಸೂದೆಗೆ ಸಹಿ ಹಾಕಲು ನಿರಾಕರಿಸಿದ ಕೇರಳ ರಾಜ್ಯಪಾಲ

Similar News