ಕ್ರೌಡ್‌ ಫಂಡಿಂಗ್‌ ಹಣ ದುರ್ಬಳಕೆ ಆರೋಪ: ಟಿಎಂಸಿ ವಕ್ತಾರ ಸಾಕೇತ್‌ ಗೋಖಲೆಗೆ ಜಾಮೀನು ನಿರಾಕರಣೆ

Update: 2023-01-06 06:13 GMT

ಅಹ್ಮದಾಬಾದ್: ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರಿಗೆ ಅಹಮದಾಬಾದ್ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಡಿಸೆಂಬರ್ 30 ರಂದು ದಿಲ್ಲಿಯಿಂದ ಗೋಖಲೆಯನ್ನು ಬಂಧಿಸಿತ್ತು. ಗುಜರಾತ್ ಪೊಲೀಸರು ಒಂದು ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್‌ ರನ್ನು ಬಂಧಿಸಿದ್ದು ಇದು ಮೂರನೇ ಬಾರಿಯಾಗಿದೆ.

ಗುರುವಾರ, ಅಹಮದಾಬಾದ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಖಲೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 467 (ನಕಲಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗಮನಿಸಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಪಿಟಿಐ ವರದಿ ಮಾಡಿದೆ. ನಂತರ ಗೋಖಲೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಮೊರ್ಬಿ ಸೇತುವೆ ಕುಸಿತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ 30 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾದ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಕ್ಲಿಪ್ಪಿಂಗ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಡಿಸೆಂಬರ್‌ನಲ್ಲಿ ಗೋಖಲೆ ಅವರನ್ನು ನಾಲ್ಕು ದಿನಗಳಲ್ಲಿ ಎರಡು ಬಾರಿ ಬಂಧಿಸಲಾಯಿತು. ಆದರೆ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಈ ಮಾಹಿತಿಯು ನಕಲಿ ಎಂದು ಬಣ್ಣಿಸಿತ್ತು.

ಮಚ್ಚು ನದಿಯ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ಒಂದು ದಿನದ ನಂತರ ನವೆಂಬರ್ 1 ರಂದು ಪ್ರಧಾನಿ ಮೊರ್ಬಿಗೆ ಭೇಟಿ ನೀಡಿದ್ದರು.

ಗೋಖಲೆಯನ್ನು ಮೊದಲು ಡಿಸೆಂಬರ್ 5 ರಂದು ಜೈಪುರದಲ್ಲಿ ಗುಜರಾತ್ ಪೊಲೀಸರು ರಾಜಸ್ಥಾನ ಪೊಲೀಸರಿಗೆ ತಿಳಿಯದಂತೆ ಬಂಧಿಸಿದ್ದರು. ಅವರನ್ನು ಅಹಮದಾಬಾದ್‌ಗೆ ಕರೆತಂದ ನಂತರ ಔಪಚಾರಿಕವಾಗಿ ಬಂಧಿಸಲಾಯಿತು ಮತ್ತು ನಂತರ ಡಿಸೆಂಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ರಾಜಕೀಯ ಮೈಲೇಜ್ ಪಡೆಯಲು ಮೋದಿಯವರ ಮೋರ್ಬಿ ಭೇಟಿಯ ಬಗ್ಗೆ ಗೋಖಲೆ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದರು.

Similar News