ಮುಂದಿನ ವರ್ಷ ಜ.1ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಸಿದ್ಧವಾಗಲಿದೆ: ಅಮಿತ್‌ ಶಾ

Update: 2023-01-06 07:24 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಮುಂದಿನ ವರ್ಷ ಜನವರಿ 1ಕ್ಕೆ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಘೋಷಿಸಿದ್ದಾರೆ.

ತ್ರಿಪುರಾದ ಸಬ್ರೂಮ್ ಪಟ್ಟಣದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಳಂಬ ಮಾಡಲು ಯತ್ನಿಸಿತ್ತು ಎಂದು ಇದೇ ವೇಳೆ ಅವರು ಆರೋಪಿಸಿದರು.

ತ್ರಿಪುರಾದಲ್ಲಿ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

"ಮೊಘಲ್ ಚಕ್ರವರ್ತಿ ಬಾಬರ್ ದೇವಾಲಯವನ್ನು ಧ್ವಂಸಗೊಳಿಸಿ ಹೊರಟುಹೋದನು ಮತ್ತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ, ಕಾಂಗ್ರೆಸ್ ಅದನ್ನು ನ್ಯಾಯಾಲಯಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿತು. ಸೆಷನ್ಸ್ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್, ಮತ್ತೆ ಸೆಷನ್ಸ್ ಕೋರ್ಟ್ ಎಂದು ಅಲೆಯುವಂತೆ ಮಾಡಿತು" ಎಂದು ಶಾ ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರವೇ ರಾಮಮಂದಿರ ನಿರ್ಮಾಣದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ ಎಂದು ಶಾ ಹೇಳಿದರು.

"2019 ರಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಮಮಂದಿರ ನಿರ್ಮಾಣದ ಭರವಸೆಯನ್ನು ನೀಡುತ್ತಲೇ ಇದ್ದರೂ, ಅದು ಯಾವಾಗ ಮುಗಿಯುತ್ತದೆ ಎಂದು ನಾವು ಎಂದಿಗೂ ನಿಗದಿತ ದಿನಾಂಕವನ್ನು ನೀಡುವುದಿಲ್ಲ ಎಂದು ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಜನವರಿ 1, 2024 ರಂದು ಸಿದ್ಧವಾಗಲಿದೆ ಎಂದು ನಾನು ಅವರಿಗೆ ಮತ್ತು ಎಲ್ಲರಿಗೂ ಹೇಳಲು ಬಯಸುತ್ತೇನೆ" ಎಂದು ಅಮಿತ್‌ ಶಾ ಘೋಷಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಆಗಸ್ಟ್ 2020 ರಲ್ಲಿ ಪ್ರಾರಂಭವಾಗಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಅದರ ಶಂಕುಸ್ಥಾಪನೆ ಮಾಡಿದ್ದರು. ಈ ಕುರಿತು ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.

Similar News