ಜೈನರ ಪ್ರತಿಭಟನೆ ಬಳಿಕ ಪಾರಸ್‌ನಾಥ ವನ್ಯಧಾಮ ಪ್ರವಾಸಿ ಯೋಜನೆ ಕೈಬಿಟ್ಟ ಕೇಂದ್ರ ಸರ್ಕಾರ

Update: 2023-01-06 12:42 GMT

ಹೊಸದಿಲ್ಲಿ: ದೇಶಾದ್ಯಂತ ಜೈನ ಸಮುದಾಯದ ಪ್ರತಿಭಟನೆ ಭುಗಿಲೆದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಪಾರಸ್‌ನಾಥ ವನ್ಯಧಾಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆಯನ್ನು ಪರಿಷ್ಕರಿಸಿದೆ. ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆ ವ್ಯಾಪ್ತಿಯ ಈ ಪ್ರದೇಶ ಜೈನರ ಪವಿತ್ರ ಶ್ರದ್ಧಾಕೇಂದ್ರವಾಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಪಾರಸನಾಥ ಬೆಟ್ಟದ ಸುತ್ತ ಪರಿಸರ ಪ್ರವಾಸೋದ್ಯಮ ಮತ್ತು ಇತರ ಆಕ್ಷೇಪಾರ್ಹ ಚಟುವಟಿಕೆಗಳನ್ನು ಕೈಗೊಳ್ಳದಂತೆ ತಡೆಯಾಜ್ಞೆ ವಿಧಿಸಿದೆ.

ಕೇಂದ್ರದ ನಿರ್ಧಾರದ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿರುವ ಪರಿಸರ ಸಚಿವಾಲಯ, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಷೇಧಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಮದ್ಯ ಹಾಗೂ ಮಾಂಸದ ಆಹಾರ ಪದಾರ್ಥಗಳು, ದೊಡ್ಡ ಧ್ವನಿಯಲ್ಲಿ ಸಂಗೀತ, ಅನಧಿಕೃತವಾಗಿ ಡೇರೆ ಹೂಡುವುದು ಮತ್ತು ಚಾರಣ ಕೈಗೊಳ್ಳುವುದನ್ನು ಕೂಡಾ ತಡೆಯುವಂತೆ ಆದೇಶಿಸಿದೆ.

ಪರಿಷ್ಕೃತ ಇಎಸ್‌ಝೆಡ್ ಅಧಿಸೂಚನೆಯ ನಿಬಂಧನೆಗಳ ಜಾರಿಯನ್ನು ಖಾತರಿಪಡಿಸುವಂತೆ ನಿಗಾ ವಹಿಸಲು ಸಮಿತಿಯನ್ನು ಕೂಡಾ ಸಚಿವಾಲಯ ರಚಿಸಿದೆ. ಈ ನಿಗಾ ಸಮಿತಿಗೆ ಜೈನ ಸಮುದಾಯದ ಇಬ್ಬರು ಹಾಗೂ ಸ್ಥಳೀಯ ಬುಡಕಟ್ಟಿನ ಒಬ್ಬರು ಸದಸ್ಯರನ್ನು ಕಾಯಂ ಆಹ್ವಾನಿತರಾಗಿ ಸೇರಿಸಿಕೊಳ್ಳುವಂತೆಯೂ ನಿರ್ದೇಶಿಸಿದೆ.

"ಸಮ್ಮೇದ್ ಶಿಖರ್‌ಜಿ ಪರ್ವತ್ (ಪಾರಸನಾಥ ಬೆಟ್ಟ) ಜೈನಧರ್ಮಕ್ಕೆ ವಿಶ್ವದ ಅತ್ಯಂತ ಪವಿತ್ರ ಮತ್ತು ಶ್ರದ್ಧೆಯ ತೀರ್ಥಸ್ಥಾನವಾಗಿದೆ. ಕೇಂದ್ರ ಸರ್ಕಾರ ಈ ಜೈನ ಕೇಂದ್ರದ ಪಾವಿತ್ರ್ಯ ಮತ್ತು ಮಹತ್ವವನ್ನು ಪರಿಗಣಿಸಿ ಇದನ್ನು ಯಥಾಸ್ಥಿತಿಯಲ್ಲಿ ನಿರ್ವಹಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ" ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಸಚಿವಾಲಯದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಟಿಎಂಸಿ ವಕ್ತಾರ ಸಾಕೇತ್‌ ಗೋಖಲೆಗೆ ಜಾಮೀನು ನಿರಾಕರಣೆ

Similar News