ಸೀಟ್‌ ಕಡಿಮೆಯಾದರೂ ಶೌಚಾಲಯ ಹೆಚ್ಚಿರಲಿ: ಏರ್‌ ಇಂಡಿಯಾ 'ಮೂತ್ರ ಪ್ರಕರಣದ' ಕುರಿತು ನೆಟ್ಟಿಗರ ವ್ಯಂಗ್ಯ

Update: 2023-01-06 11:31 GMT

ಹೊಸದಿಲ್ಲಿ: ನ. 26 ರಂದು ನ್ಯೂಯಾರ್ಕ್–ದಿಲ್ಲಿ ನಡುವೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಮದ್ಯದ ಅಮಲಿನಲ್ಲಿದ್ದ ಬಿಸಿನೆಸ್ ಕ್ಲಾಸ್ ಪ್ರಯಾಣಿಕನೊಬ್ಬ ಸಹ-ಪ್ರಯಾಣಿಕೆಯ ಮೇಲೆ ಮೂತ್ರವಿಸರ್ಜನೆಗೈದ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದ ಹತ್ತು ದಿನಗಳಲ್ಲಿ ಇಂತಹುದೇ ಇನ್ನೊಂದು ಘಟನೆ ಪ್ಯಾರಿಸ್-ದಿಲ್ಲಿ ವಿಮಾನದಲ್ಲಿ ನಡೆದಿರುವುದು ಹಾಗೂ ಈ ಪ್ರಕರಣದಲ್ಲಿ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕೆಯ ಬ್ಲಾಂಕೆಟ್ ಮೇಲೆ ಮೂತ್ರವಿಸರ್ಜನೆಗೈದಿರುವುದು ಆಘಾತ ಮೂಡಿಸಿರುವ ನಡುವೆ ಟ್ವಿಟರ್‌ನಲ್ಲಿ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

"ಏರ್‌ ಇಂಡಿಯಾದಲ್ಲಿ ಪ್ರಯಾಣಿಕರೇಕೆ ಸ್ವಚ್ಛಂದ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ? ಅವರ ಖಡಕ್‌ ಬಿಯರ್‌ ಕಾರಣವಿರಬೇಕು. ಮದ್ಯದೊಂದಿಗೆ ಪ್ರಯಾಣಿಕರಿಗೆ ಅಡಲ್ಟ್‌ ಡಯಾಪರ್‌ಗಳನ್ನು ನೀಡಬೇಕೆಂದು ಏರ್‌ ಇಂಡಿಯಾವನ್ನು ವಿನಂತಿಸುತ್ತೇನೆ," ಎಂದು ಒಬ್ಬರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು ಟ್ವೀಟ್‌ ಮಾಡಿ "ಇಂತಹ ಪ್ರಯಾಣಿಕರನ್ನು ಕ್ರೆಡಿಟ್‌ ರೇಟಿಂಗ್‌ ಏಜನ್ಸಿಗಳಿಗೆ ವರದಿ ಮಾಡಲು ಏರ್‌ಲೈನ್‌ ಸಂಸ್ಥೆಗಳು ಅನುಮತಿಸಬೇಕು. ಅವರ ಕ್ರೆಡಿಟ್‌ ಇತಿಹಾಸಕ್ಕೆ ನೈತಿಕ ಸ್ಕೋರ್‌ ನೀಡುವುದು ಈ ಪರಿಸ್ಥಿತಿಯಿಂದ ಹೊರಬರಲು ಸಹಕಾರಿ," ಎಂದು ಬರೆದಿದ್ದಾರೆ.

"ವಿಮಾನದಲ್ಲಿ ಮೂತ್ರವಿಸರ್ಜನೆಗೈಯ್ಯುವುದು ಹೊಸ ಟಿಕ್‌ಟಾಕ್‌ ಟ್ರೆಂಡ್‌ ಆಗಿದೆಯೇ ಎಂದು ಒಬ್ಬರು ಹಾಸ್ಯಮಿಶ್ರಿತ ಪ್ರತಿಕ್ರಿಯೆ ನೀಡಿದರೆ ಇನ್ನೊಬ್ಬರು ಇನ್ನೊಂದು ಹೆಜ್ಜೆ ಮುಂದೆ ಹೋಗಿ "ಏರ್‌ ಇಂಡಿಯಾಗೆ ಈಗ ಕಡಿಮೆ ಸೀಟುಗಳು ಹಾಗೂ ಹೆಚ್ಚು ಶೌಚಾಲಯಗಳ ಅಗತ್ಯವಿದೆ. ವಿಮಾನ ಹತ್ತುವ ಮೊದಲು ಕಡ್ಡಾಯವಾಗಿ ಮೂತ್ರವಿಸರ್ಜಿಸುವುದು ಹಾಗೂ ಹೊಟ್ಟೆಯ ಸೋನೋಗ್ರಾಫಿ ವರದಿ ಕಡ್ಡಾಯಗೊಳಿಸಬೇಕು," ಎಂದು ಬರೆದಿದ್ದಾರೆ.

ವಿಮಾನದಲ್ಲಿನ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲವೇ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು | ಸ್ನಾನ ಮಾಡದೇ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹಲ್ಲೆ: ಮಹಿಳೆ ಆರೋಪ

Similar News