ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಮೊದಲ ಸಭೆಯಲ್ಲಿ ಆಪ್-ಬಿಜೆಪಿ ಸದಸ್ಯರ ಮಾರಾಮಾರಿ

ಮೇಯರ್‌ ಆಯ್ಕೆ ಮುಂದಕ್ಕೆ, ಸಭೆ ಮುಂದೂಡಿಕೆ

Update: 2023-01-06 09:48 GMT

ಹೊಸದಿಲ್ಲಿ: ಹೊಸದಾಗಿ ಚುನಾಯಿತವಾದ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ನ ಮೊದಲ ಸಭೆಯಲ್ಲಿ ಇಂದು ಆಮ್‌ ಆದ್ಮಿ ಪಕ್ಷ (AAP) ಹಾಗೂ ಬಿಜೆಪಿ (BJP) ಕೌನ್ಸಿಲರ್‌ಗಳ ನಡುವೆ ನಡೆದ ಹೊಯ್‌ಕೈ ಹಿನ್ನೆಲೆಯಲ್ಲಿ ಮೇಯರ್‌ ಚುನಾವಣೆಯನ್ನು ಸದ್ಯಕ್ಕೆ ನಡೆಸದೇ ಇರಲು ನಿರ್ಧರಿಸಲಾಗಿದೆಯಲ್ಲದೆ ಸಭಯನ್ನೂ ಮುಂದೂಡಲಾಗಿದೆ.

ಹೊಸದಾಗಿ ಚುನಾಯಿತ ಸದಸ್ಯರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Aravind Kejriwal) ವಿರುದ್ಧ ಘೋಷಣೆ ಮೊಳಗಿಸಿದ್ದಾರೆ. ಆಪ್‌ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಕೈಕೈಮಿಸಲಾಯಿಸಿ ನೆಲದಲ್ಲೂ ಬಿದ್ದ ದೃಶ್ಯಗಳು ಕಂಡು ಬಂದವು.

ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೇನಾ ಅವರು ನೇಮಕಗೊಳಿಸಿದ ತಾತ್ಕಾಲಿಕ ಸ್ಪೀಕರ್‌ ಸತ್ಯ ಶರ್ಮ ಅವರು  ಮೇಯರ್‌ ಚುನಾವಣೆಗೆ ಮುಂಚಿತವಾಗಿ ನಾಮನಿರ್ದೇಶಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸುತ್ತಿರುವುದರ ವಿರುದ್ಧ ಪ್ರತಿಭಟನೆಗಳು ನಡೆದವು. ಶರ್ಮ ಅವರು ಮನೋಜ್‌ ಕುಮಾರ್‌ ಅವರನ್ನು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದಾಗ ಆಪ್‌ ಶಾಸಕರು ಹಾಗು ಕೌನ್ಸಿಲರ್‌ಗಳು ಸಭೆಯ ಮಧ್ಯಭಾಗಕ್ಕೆ ಧಾವಿಸಿ ಘೋಷಣೆಗಳನ್ನು ಮೊಳಗಿಸಿದರಲ್ಲದೆ ಚುನಾಯಿತ ಸದಸ್ಯರ ಪ್ರಮಾಣವಚನ ನಂತರ ನಾಮನಿರ್ದೇಶಿತ ಸದಸ್ಯರ ಪ್ರಮಾಣವಚನ ನಡೆಯಬೇಕೆಂದು ಆಗ್ರಹಿಸಿದರು. ದಿಲ್ಲಿ ಸರ್ಕಾರವನ್ನು ವಿಶ್ವಾಸಕ್ಕೆ ಪಡೆಯದೆ 10 ಮಂದಿ ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಎಲ್‌ಜಿ ಸೂಚಿಸಿರುವುದಕ್ಕೆ ಆಪ್‌ ಈ ಹಿಂದೆಯೇ ಆಕ್ಷೇಪಿಸಿತ್ತು.

ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಸಹಾಯ ಮಾಡಿ ಮೇಯರ್‌ ಚುನಾವಣೆ ಮೇಲೆ ಪ್ರಭಾವ ಬೀರಲು ಲೆಫ್ಟಿನೆಂಟ್‌ ಗವರ್ನರ್‌ ಪ್ರಯತ್ನಿಸುತ್ತಿದ್ದಾರೆ ಎಂದು ಆಪ್‌ ಆರೋಪಿಸಿದೆ. ಬಿಜೆಪಿಯತ್ತ ಒಲವು ಹೊಂದಿರುವವರನ್ನು ನಾಮನಿರ್ದೇಶಿತ ಸದಸ್ಯ ಹುದ್ದೆಗೆ ಲೆಫ್ಟಿನೆಂಟ್‌ ಗವರ್ನರ್‌ ಹೆಸರಿಸಿದ್ದಾರೆಂದು ಕೇಜ್ರಿವಾಲ್‌ ಕೂಡ ಆರೋಪಿಸಿದ್ದಾರೆ.

ತಾನು ಮೇಯರ್‌ ಚುನಾವಣೆ ಗೆಲ್ಲುವುದಾಗಿ  ಬಿಜೆಪಿ ಕೂಡ ಹೇಳಿಕೊಳ್ಳುತ್ತಿದೆ.

ಆಪ್‌ ಮೇಯರ್‌ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಶೆಲ್ಲಿ ಒಬೆರಾಯ್‌ ಅವರನ್ನು ಹೆಸರಿಸಿದ್ದರೆ ಬಿಜೆಪಿ ಕೊನೇ ಕ್ಷಣದಲ್ಲಿ ರೇಖಾ ಗುಪ್ತಾ ಅವರ ಹೆಸರು ಮುಂದಿಟ್ಟಿತ್ತು.

ಇದನ್ನೂ ಓದಿ: 2021ಕ್ಕೆ ನಿಗದಿಯಾಗಿದ್ದ ಜನಗಣತಿ ಕಾರ್ಯ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ: ವರದಿ

Similar News