ನಾಗೋನ್‌ ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಅಸ್ಸಾಂ ಸಿಎಂ

Update: 2023-01-06 11:13 GMT

 ಗುವಹಾಟಿ: ಅಸ್ಸಾಂನ ನಾಗೋನ್‌ ಜಿಲ್ಲೆಯ ಬತದ್ರಬ ಪಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಹೇಳಿದ್ದಾರೆ.

ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾದವರನ್ನು ತೆರವುಗೊಳಿಸುವ ಕಾರ್ಯವನ್ನು ನಾಗೋನ್‌ ಜಿಲ್ಲಾಡಳಿತ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ನಾಲ್ಕು ಗ್ರಾಮಗಳಲ್ಲಿ ಆರಂಭಿಸಿತ್ತು.

ನಾಗೋನ್‌ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾದ ಐದು ಮಂದಿಯ ಮನೆಗಳನ್ನು ಮೇ ತಿಂಗಳಿನಲ್ಲಿ ನೆಲಸಮಗೊಳಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸುವಂತೆ ಗುವಹಾಟಿ ಹೈಕೋರ್ಟ್‌ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸೂಚಿಸಿದ ಎರಡು ದಿನಗಳಲ್ಲಿ ಸರ್ಮ ಅವರ ಹೇಳಿಕೆ ಬಂದಿದೆ. ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ, ಕೆಲವು ಅಧಿಕಾರಿಗಳ ತಪ್ಪಾದ ಕ್ರಮವನ್ನು ಮುಂದಿಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಲಾಗುವುದಿಲ್ಲ, ಒತ್ತುವರಿ ನಡೆದಿದೆ ಎಂದಾದರೆ ತೆರವು ಕಾರ್ಯಾಚರಣೆ ನಡೆಯುವುದು. ಸುಮ್ಮನೆ ಕುಳಿತುಕೊಳ್ಳುವ ಸರ್ಕಾರ ನಮ್ಮದಲ್ಲ, 365 ದಿನಗಳು ಅಥವಾ ಐದು ವರ್ಷಗಳು ನಾವು ಕೆಲಸ ಮುಂದುವರಿಸುವೆವು ಎಂದು ಅವರು ಹೇಳಿದರು.

Similar News