×
Ad

ಪಚ್ಚನಾಡಿಯಲ್ಲಿ ಮತ್ತೆ ಬೆಂಕಿ ಅವಘಡ: ವಾಸನೆಯುಕ್ತ ದಟ್ಟ ಹೊಗೆ; ಸ್ಥಳೀಯರಿಗೆ ಕಾಡಿದ ಆತಂಕ

Update: 2023-01-06 22:49 IST

ಮಂಗಳೂರು: ನಗರದ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಶುಕ್ರವಾರ ಮತ್ತೆ ಬೆಂಕಿ ಅವಘಡ ಸಂಭವಿಸಿದ್ದು, ವಾಸನೆಯುಕ್ತ ದಟ್ಟ ಹೊಗೆಯು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು ವಿಮಾನ ನಿಲ್ದಾಣ, ಎಂಆರ್‌ಪಿಎಲ್, ಎನ್‌ಎಂಪಿಟಿ, ಕೆಐಓಸಿಎಲ್ ಸಹಿತ ವಿವಿಧ ಭಾಗದ 10 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿತು. ವಾಹನಗಳಲ್ಲದೆ 12 ಜೆಸಿಬಿ-ಹಿಟಾಚಿಗಳ ಮೂಲಕವೂ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಲಾಯಿತು.

ಶುಕ್ರವಾರ ಮಧ್ಯಾಹ್ನ ಸುಮಾರು 12ಕ್ಕೆ ಕಸದ ರಾಶಿಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿದ್ದು, ಬಳಿಕ ಇತರ ಕಡೆ ಹಬ್ಬಿತು ಎನ್ನಲಾಗಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಹಾಕಲಾದ ತ್ಯಾಜ್ಯಗಳ ರಾಶಿಗೆ ಬೆಂಕಿ ಹರಡಿ ಆಸುಪಾಸು ವಾಸನೆಯುಕ್ತ ದಟ್ಟ ಹೊಗೆ ಕಾಣಿಸಿತು.

ಡಂಪಿಂಗ್ ಯಾರ್ಡ್‌ಗೆ ತಗಲಿದ ಬೆಂಕಿಯನ್ನು ನಂದಿಸಲು ಯಾರ್ಡ್‌ನ ಕಾರ್ಮಿಕರು ರಾತ್ರಿ ವೇಳೆಯೂ ಆತಂಕದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಿಟಾಚಿ ಯಂತ್ರಗಳು ಬೆಂಕಿ ಕಾಣಿಸಿಕೊಂಡ ಕಸದ ಮಧ್ಯಭಾಗದಲ್ಲಿಯೇ ತೆರಳಿ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ. ಗಾಳಿ ಜೋರಾಗಿ ಬೀಸಿದಾಗ ದಟ್ಟ ಹೊಗೆಯಲ್ಲಿ ಹಿಟಾಚಿ ಯಂತ್ರವೂ ಕಾಣಿಸುತ್ತಿರಲಿಲ್ಲ. ಬೆಂಕಿ ನಂದಿದರೂ ಕೂಡ ಪೂರ್ಣವಾಗಿ ಹೊಗೆ ನಿಲ್ಲಲು ಕೆಲವು ದಿನ ಬೇಕು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಪಾಲಿಕೆಯ ಸದಸ್ಯರಾದ ಭಾಸ್ಕರ್ ಕೆ., ಸಂಗೀತಾ ನಾಯಕ್, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
 

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ. ವೈ.ಭರತ್ ಶೆಟ್ಟಿ,  ಇಲ್ಲಿನ 42 ಎಕರೆ ಪ್ರದೇಶದಲ್ಲಿ ತ್ಯಾಜ್ಯವಿದೆ. ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಲಾಗಿದೆ. ಈ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವು ಮಾಡಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವ ಕಾಮಗಾರಿ ಕೆಲವು ದಿನದ ಹಿಂದೆ ಆರಂಭಿಸಲಾಗಿದೆ. 2 ವರ್ಷದ ಒಳಗೆ ಇದು ಪೂರ್ಣವಾಗಲಿದೆ. ಬಳಿಕ ಯಾವುದೇ ಸಮಸ್ಯೆಯಾಗದು. ವಾಸನೆಪೂರಿತ ಹೊಗೆಯಿಂದ ಸಮಸ್ಯೆ ಅನುಭವಿಸುವವರಿಗೆ ಆರೋಗ್ಯ ತಪಾಸಣೆ ಹಾಗೂ ಅಗತ್ಯವಿದ್ದರೆ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.


Similar News