ವಿಕಿಪೀಡಿಯಾದಲ್ಲಿ ಸೌದಿ ಅರೆಬಿಯಾ ಹಸ್ತಕ್ಷೇಪ: ತನಿಖಾ ವರದಿ ಪ್ರತಿಪಾದನೆ

Update: 2023-01-06 17:25 GMT

ದುಬೈ, ಜ.6: ವಿಕಿಪೀಡಿಯಾದಲ್ಲಿ ಪ್ರಕಟವಾಗುವ ವಿಷಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸೌದಿ ಅರೆಬಿಯಾ ಸರಕಾರಿ ಏಜೆಂಟರು ವಿಕಿಪೀಡಿಯಾದೊಳಗೆ ನುಸುಳಿದ್ದು ಇಬ್ಬರು ಸ್ವತಂತ್ರ ವಿಕಿಪೀಡಿಯಾ ನಿರ್ವಾಹಕರನ್ನು ಬಂಧಿಸಿದ್ದಾರೆ ಎಂದು ಡಿಜಿಟಲ್ ಹಕ್ಕುಗಳ ಸಂಘಟನೆ ಪ್ರತಿಪಾದಿಸಿದೆ.

ಸೌದಿ ಅರೆಬಿಯಾ ವಿಕಿಪೀಡಿಯಾಕ್ಕೆ ನುಸುಳಿದೆ ಮತ್ತು ರಾಜಕೀಯ ಬಂಧಿತರ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಸೇರಿಸಿದ ವಿಕಿಪೀಡಿಯಾ ಸಂಪಾದಕರನ್ನು ವಿಚಾರಣೆಗೆ ಒಳಪಡಿಸಿದೆ ಎಂಬ ತನಿಖಾ ವರದಿಯನ್ನು ‘ಡೆಮಾಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ(ಡಾನ್) ಮತ್ತು ಸೋಶಿಯಾ ಮೀಡಿಯಾ ಎಕ್ಸ್ಚೇಂಜ್ ಎಂಬ ಸಂಸ್ಥೆಗಳು ಬಿಡುಗಡೆಗೊಳಿಸಿವೆ. ವರದಿಯ ಪ್ರಕಾರ, ವಿಕಿಪೀಡಿಯಾದಲ್ಲಿ ದೇಶದ ಕುರಿತ ಮಾಹಿತಿಯ ಮೇಲೆ ನಿಯಂತ್ರಣ ಸಾಧಿಸಲು ಸರಕಾರಿ ಏಜೆಂಟರಾಗಿ ಸೇವೆ ಸಲ್ಲಿಸಲು ಸೌದಿ ಸರಕಾರ ಉನ್ನತ ಶ್ರೇಣಿಯ ನಿರ್ವಾಹಕರನ್ನು ವಿಕಿಪೀಡಿಯಾದಲ್ಲಿ ನೇಮಿಸಿದೆ.

2020ರಲ್ಲಿ ಸೌದಿ ಸರಕಾರ ವಿಕಿಪೀಡಿಯಾದ ಇಬ್ಬರು ಉನ್ನತ ಶ್ರೇಣಿಯ ನಿರ್ವಾಹಕರನ್ನು ಸೌದಿ ಸರಕಾರ ಬಂಧಿಸಿತ್ತು ಎಂದು ವರದಿ ಹೇಳಿದೆ.
ಡೆಮಾಕ್ರಸಿ ಫಾರ್ ಅರಬ್ ವರ್ಲ್ಡ್ ನೌ ಎಂಬುದು ಹತ್ಯೆಗೀಡಾದ ಸೌದಿ ಪತ್ರಕರ್ತ ಜಮಾಲ್ ಖಶೋಗಿ ಅವರು ಸ್ಥಾಪಿಸಿದ ಮಾನವ ಹಕ್ಕುಗಳ ಸಂಸ್ಥೆಯಾಗಿದ್ದರೆ, ಸೋಶಿಯಾ ಮೀಡಿಯಾ ಎಕ್ಸ್ಚೇಂಜ್ ಎಂಬುದು ಅರಬ್ ಜಗತ್ತಿನಲ್ಲಿ ಡಿಜಿಟಲ್ ಹಕ್ಕುಗಳನ್ನು ಉತ್ತೇಜಿಸುವ ಲೆಬನಾನ್ ಮೂಲದ ಸಂಸ್ಥೆಯಾಗಿದೆ. 2022ರಲ್ಲಿ ಸೌದಿಯಲ್ಲಿನ ತನ್ನ ಎಲ್ಲಾ ನಿರ್ವಾಹಕರನ್ನು (ಅಡ್ಮಿನ್) ವಿಕಿಮೀಡಿಯಾ ವಜಾಗೊಳಿಸಿದೆ ಎಂದು ವಿಕಿಪೀಡಿಯಾದ ಮೂಲ ಸಂಸ್ಥೆಯಾದ ವಿಕಿಮೀಡಿಯಾ 2022ರಲ್ಲಿ ನಡೆಸಿದ ಆಂತರಿಕ ತನಿಖೆಯನ್ನು ಉಲ್ಲೇಖಿಸಿ ವರದಿ ಹೇಳಿದೆ.

ಸರಕಾರಿ ಏಜೆಂಟರು ಸ್ವತಂತ್ರ ಸಂಪಾದಕರ ಸೋಗಿನಲ್ಲಿ ಕಾರ್ಯನಿರ್ವಹಿಸಿರುವುದು ಮತ್ತು ಆಜ್ಞೆಗಳನ್ನು ಪಾಲಿಸದ ಸಂಪಾದಕರ ಜೈಲುವಾಸವು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸೌದಿ ಸರಕಾರ ಗೂಢಚರ್ಯೆ ಮಾಡುತ್ತಿರುವುದನ್ನು ಪ್ರದರ್ಶಿಸುತ್ತದೆ ಮತ್ತು ಸೌದಿಯಲ್ಲಿ ಸ್ವತಂತ್ರ ವಿಷಯಗಳ ಪ್ರಕಟಣೆಯಿಂದ ಉಂಟಾಗುವ ಅಪಾಯವನ್ನು ತೋರಿಸುತ್ತದೆ ಎಂದು ‘ಡಾನ್’ನ ಕಾರ್ಯನಿರ್ವಾಹಕ ನಿರ್ದೇಶಕಿ ಸಾರಾ ಲಿಯಾ ವಿಟ್ಸನ್ ಹೇಳಿದ್ದಾರೆ. ವಿಕಿಮೀಡಿಯಾದಿಂದ ಅನುಮೋದಿಸಲ್ಪಟ್ಟ, ‘ವಿಕಿಪೀಡಿಯಾ ಬಳಕೆದಾರರು’ ಎಂದು ಕರೆಯಲ್ಪಡುವ ಸ್ವಯಂಸೇವಕ ನಿರ್ವಾಹಕರು ಮತ್ತು ಸಂಪಾದಕರ ಮೂಲಕ ವಿಕಿಪೀಡಿಯಾ ಕಾರ್ಯನಿರ್ವಹಿಸುತ್ತದೆ.

ಈ ಅನುಮೋದಿತ ‘ಬಳಕೆದಾರರು’ ವಿಕಿಮೀಡಿಯಾದ ಉದ್ಯೋಗಿಗಳಲ್ಲ ಮತ್ತು ಇವರಿಗೆ ಸಂಭಾವನೆ ಸಿಗುವುದಿಲ್ಲ. ಆದರೆ, ವಿಕಿಪೀಡಿಯಾದಲ್ಲಿ ಪ್ರಕಟವಾಗುವ ವಿಷಯಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ವಿಶೇಷ ಸವಲತ್ತುಗಳನ್ನು ವಿಶ್ವಾಸಾರ್ಹ, ಸ್ವತಂತ್ರ ಸಂಪಾದಕರಿಗೆ ವಿಕಿಮೀಡಿಯಾದ ಸಮುದಾಯ ನಿಯಮಗಳು ನೀಡುತ್ತವೆ. ವಿಷಯ ಪುಟಗಳನ್ನು ಸಂಪಾದಿಸುವ, ಅಳಿಸುವ, ರಕ್ಷಿಸುವ ಪರಿಕರಗಳನ್ನು ಬಳಸುವ ವಿಶೇಷ ಅಧಿಕಾರವನ್ನು ನಿರ್ವಾಹಕರು(ಅಡ್ಮಿನ್) ಹೊಂದಿದ್ದಾರೆ.

ಸೌದಿ ಅರೆಬಿಯಾ ಸರಕಾರವು 2020ರಲ್ಲಿ ಸೌದಿ ಅರೆಬಿಯಾದಲ್ಲಿ ಇಬ್ಬರು ಉನ್ನತ ಶ್ರೇಣಿಯ ವಿಕಿಪೀಡಿಯಾ ಸ್ವಯಂಸೇವಕ ನಿರ್ವಾಹಕರಾದ ಒಸಾಮಾ ಖಾಲಿದ್ ಮತ್ತು ಜಿಯಾದ್ ಅಲ್-ಸೋಫಿಯಾನಿ ಎಂಬವರನ್ನು ಬಂಧಿಸಿದೆ. ಸಾರ್ವಜನಿಕ ಅಭಿಪ್ರಾಯವನ್ನು ತಿರುಚಿರುವುದು ಮತ್ತು ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಇವರಿಗೆ ಕ್ರಮವಾಗಿ 32 ವರ್ಷ ಮತ್ತು 8 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ‘ಡಾನ್’ ವರದಿ ಮಾಡಿದೆ. 

Similar News