ವಿಶ್ವಸಂಸ್ಥೆ ಇಸ್ರೇಲನ್ನು ತಡೆಯದಿದ್ದರೆ ನಮ್ಮ ಜನ ತಡೆಯುತ್ತಾರೆ: ಫೆಲಸ್ತೀನ್ ರಾಯಭಾರಿ

Update: 2023-01-06 17:29 GMT

ನ್ಯೂಯಾರ್ಕ್, ಜ.6: ‘ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಮ್ಮನ್ನು ತಡೆಯಬೇಕು. ಅದು ಅವರ ಜವಾಬ್ದಾರಿ. ಅಂತರಾಷ್ಟ್ರೀಯ ನಿಯಮ ಮತ್ತು ಐತಿಹಾಸಿಕ ಯಥಾಸ್ಥಿತಿಯನ್ನು ಎತ್ತಿಹಿಡಿಯುವುದು ಎಲ್ಲಾ ದೇಶಗಳ ಜವಾಬ್ದಾರಿಯಾಗಿದೆ. ಅವರು ನಿಮ್ಮನ್ನು ತಡೆಯಬೇಕು. ಒಂದು ವೇಳೆ ಅವರು ತಡೆಯದಿದ್ದರೆ ನಮ್ಮ ಜನ ತಡೆಯಲಿದ್ದಾರೆ’ ಎಂದು ವಿಶ್ವಸಂಸ್ಥೆಗೆ ಫೆಲಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಇಸ್ರೇಲ್ಗೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಮಂಗಳವಾರ ಪೂರ್ವ ಜೆರುಸಲೇಂನ ಅಲ್-ಅಖ್ಸಾ ಮಸೀದಿಗೆ ಅಚ್ಚರಿಯ ಭೇಟಿ ನೀಡಿರುವ ಬಗ್ಗೆ ಚರ್ಚಿಸಲು ಯುಎಇ ಮತ್ತು ಚೀನಾದ ಪ್ರಸ್ತಾವನೆಯಂತೆ ನಡೆಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯನ್ನುದ್ದೇಶಿಸಿ ಮನ್ಸೂರ್ ಮಾತನಾಡುತಿದ್ದರು. ನಮ್ಮನ್ನು, ಅಂತರಾಷ್ಟ್ರೀಯ ಸಮುದಾಯವನ್ನು, ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಇಸ್ರೇಲ್ ತಿರಸ್ಕರಿಸಿರುವುದನ್ನು ಗಮನಿಸಿ ಈ ಬಗ್ಗೆ ಸದೃಢ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಇಸ್ರೇಲ್ ಸಚಿವ ಬೆನ್-ಗ್ವಿರ್ ಅವರ ಭೇಟಿಯು ಫೆಲಸ್ತೀನೀಯರ ಬದುಕಿನ ಪವಿತ್ರತೆ, ಅಂತರಾಷ್ಟ್ರೀಯ ಕಾನೂನಿನ ಪವಿತ್ರತೆ ಮತ್ತು ಅಲ್-ಹರಮ್ ಅಲ್-ಶರೀಫ್ನ ಪವಿತ್ರತೆಯ ಸಂಪೂರ್ಣ ಕಡೆಗಣನೆಯಾಗಿದೆ.

ಆದರೂ ಭದ್ರತಾ ಮಂಡಳಿ ನೇಪಥ್ಯದಲ್ಲೇ ಉಳಿದಿದೆ. ಭದ್ರತಾ ಮಂಡಳಿ ಒಳ್ಳೆಯ ವಿಷಯಗಳನ್ನು ಹೇಳುತ್ತಿದ್ದರೂ ನೇಪಥ್ಯದಲ್ಲೇ ಉಳಿದಿದೆ ಎಂದು ಹೇಳಿದರು.
ನಮ್ಮ ಜನತೆಯ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ನಾವು ಪ್ರದರ್ಶಿಸುವ ಸಂಯಮ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಎಂದಿಗೂ ದೌರ್ಬಲ್ಯವೆಂದು ಪರಿಗಣಿಸಬಾರದು. ಇಸ್ರೇಲ್ ನಡೆಯುತ್ತಿರುವ ದಾರಿಯು ದಂಗೆಗೆ ಕಾರಣವಾಗುತ್ತದೆ ಎಂಬುದನ್ನು ದಾಖಲೆಯೇ ತೋರಿಸಿಕೊಡುತ್ತದೆ ಎಂದ ಅವರು, ಅಂತರಾಷ್ಟ್ರೀಯ ಕಾನೂನು ಮತ್ತು ಶಾಂತಿಗೆ ಬದ್ಧವಾಗಿರುವ ದೇಶಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಬೆಂಕಿ ನಿಯಂತ್ರಣ ತಪ್ಪಿದ ಬಳಿಕ ಕೊರಗಿದರೆ ಪ್ರಯೋಜನವಿಲ್ಲ ಎಂದು ಮನ್ಸೂರ್ ಹೇಳಿದ್ದಾರೆ.
  
ಈ ಸಂದರ್ಭ ಮಾತನಾಡಿದ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್, ಇರಾನ್ನಲ್ಲಿ ‘ಕೊಲೆಗಾರ’ ಅಯತುಲ್ಲಾ ಆಡಳಿತ ಸೇರಿದಂತೆ ಇತರ ಅಸಂಖ್ಯಾತ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕಿರುವ ಸಮಯದಲ್ಲಿ, ಸಮಸ್ಯೆಯೇ ಅಲ್ಲದ ವಿಷಯದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ ನಡೆಸುತ್ತಿದೆ ಎಂದು ಟೀಕಿಸಿದರು. ಬೆನ್-ಗ್ವಿರ್ ಅವರ ಸಂಕ್ಷಿಪ್ತ ಭೇಟಿ ಶಾಂತಿಯುತ ಮತ್ತು ನ್ಯಾಯಸಮ್ಮತವಾಗಿದೆ. ಇದು ಅಲ್-ಅಖ್ಸಾಗೆ ಆಕ್ರಮಣವಲ್ಲ ಅಥವಾ ಫೆಲಸ್ತೀನೀಯರು ಹೇಳುತ್ತಿರುವ ಯಾವುದೇ ಕಟ್ಟುಕಥೆಯನ್ನು ಸಮರ್ಥಿಸುವುದಿಲ್ಲ ಎಂದವರು ಹೇಳಿದ್ದಾರೆ.

ಬೆನ್-ಗ್ವಿರ್ ಅವರ ಭೇಟಿಯು ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ನೆಲೆಸಲು ಕಾರಣವಾಗಿದೆ. ಪವಿತ್ರ ಸ್ಥಳದ ಪವಿತ್ರತೆ ಮತ್ತು ಶಾಂತಿಯನ್ನು ಕಾಪಾಡುವ ಅಗತ್ಯವಿದೆ ಎಂದು ಚೀನಾ ಹಾಗೂ ಯುಎಇಯ ರಾಯಭಾರಿ ಪ್ರತಿಪಾದಿಸಿದರು.

Similar News