ವಿವಾದದ ಕಿಡಿ ಹೊತ್ತಿಸಿದ ಬ್ರಿಟನ್ ಯುವರಾಜ ಹ್ಯಾರಿ ಕೃತಿ
ಲಂಡನ್, ಜ.6: ಮುಂದಿನ ವಾರ ಬಿಡುಗಡೆಗೊಳ್ಳಲಿರುವ ಬ್ರಿಟನ್ ಯುವರಾಜ ಹ್ಯಾರಿಯ ಆತ್ಮಚರಿತ್ರೆಯ ಕೆಲವು ವಿಷಯಗಳು ಸೋರಿಕೆಯಾಗಿದ್ದು ವಿವಾದದ ಕಿಡಿ ಹೊತ್ತಿಸಿದೆ. ಬ್ರಿಟನ್ನಲ್ಲಿ ಸೇನೆಯ ಸೇವೆಯಲ್ಲಿದ್ದಾಗ ವಾಯುಪಡೆಯ ಪೈಲಟ್ ಆಗಿದ್ದ ಸಂದರ್ಭ ತಾನು ಅಫ್ಘಾನಿಸ್ತಾನದಲ್ಲಿ 25 ಮಂದಿಯನ್ನು ಹತ್ಯೆ ಮಾಡಿದ್ದೆ. ಆಗ ತನಗೆ ಚೆಸ್ ಆಟದಲ್ಲಿ ಇದಿರಾಳಿಯ ಪಾನ್ಗಳನ್ನು ಹೊಡೆದುರುಳಿಸಿದಂತೆ ಭಾಸವಾಗಿತ್ತು ಎಂದು ‘ಸ್ಪ್ಯಾರ್’ ಎಂಬ ಶೀರ್ಷಿಕೆಯ ಆತ್ಮಚರಿತ್ರೆಯಲ್ಲಿ ಹ್ಯಾರಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಮುಖಂಡ ಅನಾಸ್ ಹಖಾನಿ ‘ನೀವು ಕೊಂದದ್ದು ಚೆಸ್ ದಾಳಗಳನ್ನಲ್ಲ, ಅವರು ಮಾನವರು’ ಎಂದಿದ್ದಾರೆ. ಪುಸ್ತಕದ ಮುಖಪುಟವನ್ನು ಶೇರ್ ಮಾಡಿಕೊಂಡಿರುವ ಹಖಾನಿ ‘ಮಿ. ಹ್ಯಾರಿ, ನೀವು ಕೊಂದದ್ದು ಚೆಸ್ನ ದಾಳಗಳನ್ನಲ್ಲ, ಅವರು ಮಾನವರು. ಅವರ ಬರುವಿಕೆಗಾಗಿ ಕಾದು ಕುಳಿತ ಕುಟುಂಬಗಳಿವೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್‘ ರಾಜಮನೆತನಕ್ಕೆ ಸಂಬಂಧಿಸಿದ ವಿಷಯಕ್ಕೆ ತಾನು ಪ್ರತಿಕ್ರಿಯಿಸುವುದಿಲ್ಲ’ ಎಂದಿದ್ದಾರೆ.