ಬಿಹಾರದಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ; ಸಿಎಂ ನಿತೀಶ್ ಕುಮಾರ್ ಹೇಳಿದ್ದೇನು?

Update: 2023-01-07 04:24 GMT

ಪಾಟ್ನಾ: ಬಿಹಾರದಲ್ಲಿ ಬಹು ನಿರೀಕ್ಷಿತ ಜಾತಿಗಣತಿ ಸಮೀಕ್ಷೆ ಶನಿವಾರ ಆರಂಭವಾಗಲಿದ್ದು, ಈ ನಡೆ ಸಮಾಜದ ಪ್ರತಿಯೊಂದು ವರ್ಗವನ್ನು ಮೇಲೆತ್ತಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹದಿನೈದು ದಿನಗಳ ಕಾಲ ನಡೆಯುವ ಸಮೀಕ್ಷೆಯ ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡುವುದು, ಕುಟುಂಬಗಳು ಹಾಗೂ ಕಟ್ಟಡಗಳ ಗಣತಿ ನಡೆಯಲಿದೆ. ಎರಡನೇ ಹಂತ ಏಪ್ರಿಲ್ 1 ರಿಂದ ಏಪ್ರಿಲ್ 30ರವರೆಗೆ ನಡೆಯಲಿದೆ.

"ಜಾತಿ ಸಮೀಕ್ಷೆಯಿಂದ ರಾಜ್ಯದ ಜನಸಂಖ್ಯೆಯ ವಿವರ ಲಭ್ಯವಾಗುವ ಜತೆಗೆ ಪ್ರತಿ ಜಾತಿಯ ಆರ್ಥಿಕ ಸ್ಥಿತಿಗತಿಗಳನ್ನು ಪತ್ತೆ ಮಾಡಬಹುದಾಗಿದೆ. ನಿಮ್ನವರ್ಗವನ್ನು ಮೇಲೆತ್ತಲು ಏನು ಮಾಡಬಹುದು ಎನ್ನುವುದನ್ನು ಕಂಡುಕೊಳ್ಳಲು ಇದು ನೆರವಾಗಲಿದೆ. ಎಲ್ಲರ ಅಭಿವೃದ್ಧಿ ನಮ್ಮ ಬಯಕೆ" ಎಂದು ಸಮಾಧಾನ್ ಯಾತ್ರೆಯ ವೇಳೆ ಶಿಯೋಹರ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನಿತೀಶ್ ಸ್ಪಷ್ಟಪಡಿಸಿದರು.

ರಾಷ್ಟ್ರಮಟ್ಟದಲ್ಲೂ ಜಾತಿ ಗಣತಿಯ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, ಇದು ದೇಶದ ಅಭಿವೃದ್ಧಿಗೆ ನೆರವಾಗುವುದು ಮಾತ್ರವಲ್ಲದೇ, ಸಮಾಜದ ಪ್ರತಿ ವರ್ಗದವರನ್ನು ಮೇಲೆತ್ತಲು ಸಹಕಾರಿ ಎಂದು ಬಣ್ಣಿಸಿದರು. ಸಮೀಕ್ಷೆಯಲ್ಲಿ ಎಷ್ಟು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ,ಆದರೆ ಮೇ ವರೆಗೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸಲು ಸುಮಾರು ಐದು ಲಕ್ಷ ಸಿಬ್ಬಂದಿಯ ಅಗತ್ಯತೆ ಇದೆ ಎಂದು ಆಡಳಿತ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Similar News