ಆ್ಯಂಬುಲೆನ್ಸ್‌ ದೊರೆಯದೆ ಮಹಿಳೆಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ಸಾಗಿಸಿದ ತಂದೆ, ಮಗ

Update: 2023-01-07 13:09 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಹೃದಯಾಘಾತದಿಂದ ಮೃತಪಟ್ಟ 72 ವರ್ಷದ ಲಖೀರಾಣಿ ಎಂಬ ಮಹಿಳೆಯ ಮೃತದೇಹವನ್ನು ಆಕೆಯ ಮನೆಗೆ ಸಾಗಿಸಲು ಯಾವುದೇ ಆ್ಯಂಬುಲೆನ್ಸ್‌ ದೊರೆಯದೆ ಕೊನೆಗೆ ಮಹಿಳೆಯ ಪತಿ ಹಾಗೂ ಪುತ್ರ ಸುಮಾರು 2 ಕಿಮೀ ದೂರದ ತನಕ ಮೃತದೇಹವನ್ನು ಹೆಗಲಲ್ಲಿಯೇ ಹೊತ್ತು ಸಾಗಿಸಿದ ಘಟನೆ ವರದಿಯಾಗಿದೆ.

ಮಹಿಳೆ ಆರೋಗ್ಯ ಸಮಸ್ಯೆಯಿಂದ ಬಳಲಿದಾಗ ಆಕೆಯ ಕುಟುಂಬ ರೂ. 900 ತೆತ್ತು 40 ಕಿಮೀ ದೂರದ ಜಲ್ಪೈಗುರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿತ್ತು. ಕುಟುಂಬ ಬಡತನದಿಂದ ಬಳಲುತ್ತಿತ್ತು ಹಾಗೂ ಮಹಿಳೆಯ ಪತಿ ದಿನಗೂಲಿ ಕಾಮಿಕರಾಗಿದ್ದರು ಎಂದು newindianexpress.com ವರದಿ ಮಾಡಿದೆ.

ಮೃತದೇಹವನ್ನು ವಾಪಸ್‌ ತರಲು ಆಸ್ಪತ್ರೆಗೆ ಮನವಿ ಮಾಡಿದರೂ ಆ್ಯಂಬುಲೆನ್ಸ್‌ ದೊರತಿರಲಿಲ್ಲ, ಖಾಸಗಿ ಆ್ಯಂಬುಲೆನ್ಸ್‌ಗಳು ರೂ. 3000ಕ್ಕಿಂತ ಕಡಿಮೆ ಶುಲ್ಕಕ್ಕೆ ಸೇವೆ ಒದಗಿಸಲು ನಿರಾಕರಿಸಿದ್ದವು, ನನ್ನ ತಂದೆಯ ಕಿಸೆಯಲ್ಲಿದ್ದುದು ಕೇವಲ ರೂ. 1200 ಎಂದು ಮಹಿಳೆಯ  ಪುತ್ರ ಜೈಕೃಷ್ಣ ಹೇಳಿದ್ದಾರೆ. ನಂತರ ಅನ್ಯ ದಾರಿಯಿಲ್ಲದೆ ಜೈಕೃಷ್ಣ ಮತ್ತು ಆತನ ತಂದೆ ರಾಮಪ್ರಸಾದ್‌ ಆಕೆಯ ಮೃತದೇಹವನ್ನು ಹೆಗಲಲ್ಲಿಯೇ ಹೊತ್ತು ಸಾಗಿಸಿದರು.

ಆಸ್ಪತ್ರೆಯಿಂದ ಹೊರಬರುವಾಗ ತಮಗೆ ಸಹಾಯ ಮಾಡುವ ಬದಲು ಅಲ್ಲಿನ ಸಿಬ್ಬಂದಿ ತಾವು ಮೃತದೇಹ ಹೊತ್ತುಕೊಂಡು ಹೋಗುವ ದೃಶ್ಯವನ್ನು  ತಮ್ಮ ಫೋನ್‌ಗಳಲ್ಲಿ ಸೆರೆಹಿಡಿಯುವುದರಲ್ಲಿಯೇ ನಿರತರಾಗಿದ್ದರು ಎಂದು ರಾಮಪ್ರಸಾದ್‌ ಹೇಳಿದ್ದರು.

ಕೊನೆಗೆ ಈ ಚಿತ್ರಗಳು ಹಾಗೂ ವೀಡಿಯೋಗಳು ವೈರಲ್‌ ಆಗುತ್ತಿದ್ದಂತೆಯೇ ಸಮಾಜ ಸೇವಾ ಸಂಸ್ಥೆಯೊಂದು ಘಟನೆಯ ಬಗ್ಗೆ  ತಿಳಿದು ದಾರಿ ಮಧ್ಯದಲ್ಲಿಯೇ ಅಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಟ್ಟಿದೆ.

ಈ ಘಟನೆ ಬಗ್ಗೆ ತನಿಖೆಗೆ ಜಿಲ್ಲಾ ಆರೋಗ್ಯ ಇಲಾಖೆ ಆದೇಶಿಸಿದೆ. ರೋಗಿಗಳ ಸಂಬಂಧಿಗಳಿಗೆ ಸಹಾಯ ಮಾಡಲು ಪ್ರತಿ ಆಸ್ಪತ್ರೆಯಲ್ಲಿ ಕೌಂಟರ್‌ ಲಭ್ಯವಿದೆ. ಇಲ್ಲಿ ಹೇಗೆ ಕರ್ತವ್ಯಲೋಪವಾಯಿತೆಂದು ಪರಿಶೀಲಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Similar News