ದರೋಡೆಯ ನಾಟಕವಾಡಿ ಕೆಲಸ ಕೊಟ್ಟ ಸಂಸ್ಥೆಗೆ ವಂಚಿಸಲೆತ್ನಿಸಿದ ಉದ್ಯೋಗಿ ಸೆರೆ ಸಿಕ್ಕಿದ್ದು ಹೀಗೆ...

Update: 2023-01-07 11:21 GMT

ಥಾಣೆ: ಸಂಸ್ಥೆಯ ಪರವಾಗಿ ಬ್ಯಾಂಕ್‌ನಿಂದ ತೆಗೆದಿದ್ದ ರೂ. 5 ಲಕ್ಷ ದರೋಡೆಯಾಯಿತು ಎಂದು ನಟಿಸಿ, ಅದನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳಲು ಬಯಸಿದ್ದ ಥಾಣೆ ಜಿಲ್ಲೆಯ 27 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡಿದ್ದ ಆತ, ಶುಕ್ರವಾರ ರಾತ್ರಿ ನಾನು ವರ್ತಕ್ ನಗರದಿಂದ ಥಾಣೆ ನಗರದ ಮಾನ್ಪಡಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದಾರಿ ಮಧ್ಯೆ ತಡೆದ ನಾಲ್ವರು, ನನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹೊಂದಿದ್ದ ಚೀಲವನ್ನು ಕಿತ್ತುಕೊಂಡು ಪರಾರಿಯಾದರು ಎಂದು ಆರೋಪಿಸಿದ್ದ.

ಭಾರತೀಯ ದಂಡ ಸಂಹಿತೆ 394 (ದರೋಡೆ ಮಾಡಲು ಉದ್ದೇಶಪೂರ್ವಕ ಹಲ್ಲೆ) ಅನ್ವಯ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆಗೆ ಕೈಗೊಂಡಿದ್ದರು. ಆದರೆ, ದೂರುದಾರನ ಹೇಳಿಕೆಯಲ್ಲಿ ವ್ಯತಿರಿಕ್ತ ಅಂಶಗಳು ಕಂಡು ಬಂದಿದ್ದರಿಂದ ಪೊಲೀಸರು ಸಂಶಯಗೊಂಡರು. ದೂರು ನೀಡಿದ ವ್ಯಕ್ತಿಯ ಕಣ್ಣುಗಳಲ್ಲಿ ಖಾರದ ಪುಡಿಯ ಯಾವುದೇ ಕುರುಹುಗಳಿರಲಿಲ್ಲ. ಅಲ್ಲದೆ, ಅಪರಾಧ ಘಟಿಸಿದ ಸ್ಥಳದಲ್ಲಿ ದೂರುದಾರ ಯಾವುದೇ ಚೀಲ ಹೊತ್ತೊಯ್ಯುತ್ತಿರಲಿಲ್ಲ ಎಂಬ ಸಂಗತಿ ಆ ಪ್ರದೇಶದ ಸಿಸಿಟಿವಿ ತುಣುಕುಗಳಿಂದ ತಿಳಿದು ಬಂತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರುದಾರನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ರೂ. 5 ಲಕ್ಷ ರೂಪಾಯಿಯನ್ನು ನನ್ನ ಬಳಿಯೇ ಇಟ್ಟುಕೊಳ್ಳಲು ದರೋಡೆಯ ಕತೆ ಕಟ್ಟಿದೆ ಎಂದು ಆತ ಬಾಯ್ಬಿಟ್ಟಿದ್ದಾನೆ. ಆತನಿಂದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೂರದಾರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಆ್ಯಂಬುಲೆನ್ಸ್‌ ದೊರೆಯದೆ ಮಹಿಳೆಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ಸಾಗಿಸಿದ ತಂದೆ, ಮಗ

Similar News