×
Ad

ಕೋತಿ ಹೊತ್ತೊಯ್ದ ಚಪ್ಪಲಿ ತೆಗೆಯಲೆಂದು ರೈಲಿನ ಮೇಲೆ ಹತ್ತಿದ ಯುವಕ: ಹೈ-ಟೆನ್ಶನ್‌ ವಿದ್ಯುತ್‌ ತಂತಿ ತಗುಲಿ ಸಾವು

Update: 2023-01-07 17:23 IST

ಆಗ್ರಾ: ಕೋತಿಯೊಂದು ಮಹಿಳೆಯ ಚಪ್ಪಲಿಯನ್ನು ಕಸಿದು ನಿಂತಿದ್ದ ರೈಲಿನ ಮೇಲ್ಭಾಗದಲ್ಲಿ ಕುಳಿತಿರುವುದನ್ನು ಕಂಡು ಆ ಮಹಿಳೆಗೆ ಸಹಾಯ ಮಾಡಲು ಕಸ್ಗಂಜ್-ಫರುಕ್ಕಾಬಾದ್‌ ಎಕ್ಸ್‌ಪ್ರೆಸ್‌ ರೈಲಿನ ಛಾವಣಿಯೇರಿದ  26 ವರ್ಷದ ಯುವಕನೊಬ್ಬನಿಗೆ ಹೈ-ಟೆನ್ಶನ್‌ ವಿದ್ಯುತ್‌ ತಂತಿ ತಗುಲಿ ಆತ ಸುಟ್ಟು ಕರಕಲಾದ ದಾರುಣ ಘಟನೆ ಕಸ್ಗಂಜ್‌ ರೈಲ್ವೆ ನಿಲ್ದಾಣದಿಂದ ವರದಿಯಾಗಿದೆ. ಚಪ್ಪಲಿ ಹೆಕ್ಕಲು ಹೋದಾಗ 25,000 ವೋಲ್ಟಿನ ಓವರ್‌ಹೆಡ್‌ ತಂತಿ ಆತನಿಗೆ ಆಕಸ್ಮಿಕವಾಗಿ ತಗಲಿದ್ದರಿಂದ ಈ ದುರಂತ ಸಂಭವಿಸಿದೆ. ಮೃತ ಯುವಕ ಅಶೋಕ್‌, ರೈಲ್ವೆ ಪ್ಲಾಟ್‌ಫಾರ್ಮ್‌ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಂಖ್ಯೆ 2 ರಲ್ಲಿ ಈ ಘಟನೆ ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆ ನಡೆದಿದೆ. ಹಿರಿಯ ಮಹಿಳೆಯೊಬ್ಬರಿಗೆ ಸಹಾಯ ಮಾಡಲು ಹೋಗಿ ಯುವಕ ದುರಂತ ಅಂತ್ಯ ಕಂಡಿದ್ದಾನೆ.

ದುರಂತ ನಡೆದ ಕೂಡಲೇ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಯಿತು. ಆತನ ದೇಹ ತಂತಿಗೆ ಸ್ಪರ್ಶಗೊಳ್ಳುತ್ತಿದ್ದಂತೆ ಮೂರು ಸ್ಫೋಟಗಳು ಸಂಭವಿಸಿತು ಹಾಗೂ ಆತ 10 ನಿಮಿಷಗಳಲ್ಲಿ ಕರಕಲಾಗಿ ಬಿಟ್ಟ. ಘಟನೆ ನಡೆದ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ವಿಳಂಬವಾಗಿ ಆಗಮಿಸಿದರು ಎಂದು ಮೃತನ ಸಂಬಂಧಿಕರು ದೂರಿದ್ದಾರೆ.

ಕಸ್ಗಂಜ್‌ ನಿಲ್ದಾಣದಲ್ಲಿ ಕೋತಿಗಳ ಹಾವಳಿ ಮಿತಿಮೀರಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೋತಿಗಳ ಉಪಟಳವನ್ನು ತಪ್ಪಿಸಲು ಹೋಗಿ ಆಗ್ರಾ ಪ್ರಾಂತ್ಯದಲ್ಲಿ ಕಳೆದೊಂದು ವರ್ಷದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.

ಕೋತಿಗಳ ಹಿಂಡಿನ ದಾಳಿ ತಪ್ಪಿಸುವ ಭರದಲ್ಲಿ ಛಾವಣಿಯಿಂದ ಬಿದ್ದು ಈ ವಾರ ಇಬ್ಬರು ಮಹಿಳೆಯರು ಮೃತಪಟ್ಟಿದ್ದರೆ ಇನ್ನೊಬ್ಬಾಕೆ ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ: ಆ್ಯಂಬುಲೆನ್ಸ್‌ ದೊರೆಯದೆ ಮಹಿಳೆಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ಸಾಗಿಸಿದ ತಂದೆ, ಮಗ

Similar News