ಸಂಸತ್ತಿನಲ್ಲಿ ಹೆಜ್ಜೆಯಿಡಲೂ ಭಯವಾಗುತ್ತಿದೆ: ಪ್ರಧಾನಿ ಮೋದಿಯ ಹಳೆಯ ಹೇಳಿಕೆಯನ್ನು ಅಣಕವಾಡಿದ ಪವಾರ್

Update: 2023-01-07 13:55 GMT

ಪುಣೆ,ಜ.7: ಪ್ರಧಾನಿ ನರೇಂದ್ರ ಮೋದಿಯವರ ಹಿಂದಿನ ಹೇಳಿಕೆಯೊಂದನ್ನು ಶುಕ್ರವಾರ ಇಲ್ಲಿ ಪರೋಕ್ಷವಾಗಿ ಉಲ್ಲೇಖಿಸಿದ NCP ವರಿಷ್ಠ ಶರದ್ ಪವಾರ್  ಅವರು, ಇಂತಹ ಹೇಳಿಕೆಗಳು ತಾನು ಸಂಸತ್ತನ್ನು ಪ್ರವೇಶಿಸಲು ಹೆದರಿಕೊಳ್ಳುವಂತೆ ಮಾಡಿವೆ ಎಂದು ಹೇಳಿದರು. 2016ರಲ್ಲಿ ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ ಮೋದಿಯವರು,‘ಶರದ್ ಪವಾರ್ ರಾಜಕೀಯ ಕ್ಷೇತ್ರದಲ್ಲಿ ನನ್ನ ಕೈ ಹಿಡಿದುಕೊಂಡು ಹೆಜ್ಜೆಗಳನ್ನು ಹಾಕಲು ನನಗೆ ಕಲಿಸಿದ್ದರು ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ಅಳುಕು ಇಲ್ಲ ’ಎಂದು ಹೇಳಿದ್ದರು.

‘ಪವಾರ್ ಅವರ ಶಾಲೆಯಲ್ಲಿ’ ತಾನು ರಾಜಕೀಯದ ಪಟ್ಟುಗಳನ್ನು ಕಲಿತಿದ್ದೇನೆ ಎಂದು ಮಾಜಿ ಕೇಂದ್ರ ಗೃಹಸಚಿವ ಸುಶೀಲ ಕುಮಾರ ಶಿಂದೆಯವರು ಹೇಳಿದ ಬಳಿಕ ಮೋದಿಯವರನ್ನು ಹೆಸರಿಸದೆ ಪವಾರ್ ಈ ಮಾತನ್ನು ಹೇಳಿದರು. ಶಿಂದೆ ಮತ್ತು ಪವಾರ್ ಇಲ್ಲಿಯ ಪಿಂಪ್ರಿಯಲ್ಲಿ 18ನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

‘ನನ್ನಿಂದ ತನ್ನ ರಾಜಕೀಯ ಪಟ್ಟುಗಳನ್ನು ಕಲಿತಿದ್ದಾಗಿ ಶಿಂದೆಯವರು ಹೇಳಿದರು. ನನಗೆ ಭೀತಿ ಕಾಡುತ್ತಿದೆ,ಏಕೆಂದರೆ ನನ್ನ ಕೈಹಿಡಿದು ರಾಜಕೀಯ ಪ್ರವೇಶಿಸಿದ್ದಾಗಿ ಯಾರೋ ಒಬ್ಬರು ಹೇಳಿದ್ದರು. ಆಗಿನಿಂದ ನನಗೆ ಸಂಸತ್ತಿನಲ್ಲಿ ಹೆಜ್ಜೆಯಿಡಲೂ ಭಯವಾಗುತ್ತಿದೆ ’ ಎಂದು ಪವಾರ್ ಹೇಳಿದರು.

Similar News