ಬಿಹಾರದಲ್ಲಿ ಬಹುನಿರೀಕ್ಷಿತ ಜಾತಿಯಾಧಾರಿತ ಗಣತಿ ಆರಂಭ

Update: 2023-01-07 15:05 GMT

ಪಾಟ್ನಾ,ಜ.7: ಬಿಹಾರದಲ್ಲಿ ಬಹುನಿರೀಕ್ಷಿತ ಜಾತಿಯಾಧಾರಿತ ಗಣತಿಯು ಶನಿವಾರದಿಂದ ಆರಂಭಗೊಂಡಿದೆ. ಅಭಿವೃದ್ಧಿಯನ್ನು ಬೆಂಬಲಿಸಲು ಪ್ರತಿ ಸಮುದಾಯದ ಆರ್ಥಿಕ ಸ್ಥಿತಿಯ ಬಗ್ಗೆ ನಿಖರವಾದ ಮೌಲ್ಯಮಾಪನ ಈ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಹೇಳಿದರು.

‘ಕೇಂದ್ರ ಸರಕಾರವು 2011ರ ಜನಗಣತಿಯ ಬಳಿಕ ಜಾತಿಯಾಧಾರಿತ ಗಣತಿಯನ್ನು ನಡೆಸಿತ್ತು. ಆದರೆ ಅದನ್ನು ಸಮರ್ಪಕವಾಗಿ ನಡೆಸಿರಲಿಲ್ಲ ಮತ್ತು ವರದಿಯನ್ನು ಬಹಿರಂಗಗೊಳಿಸಿರಲಿಲ್ಲ. ಅದನ್ನು ಮತ್ತೊಮ್ಮೆ ಸರಿಯಾಗಿ ನಡೆಸಿ ಎಂದು ನಾವು ಕೇಳಿಕೊಂಡಾಗ ಅವರು ನಿರಾಕರಿಸಿದ್ದರು ’ ಎಂದರು.

‘ನಾವು ಪ್ರಧಾನಿಯವರನ್ನು ಭೇಟಿಯಾಗಿ ನಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೆವು. ತಾನು ಜಾತಿಯಾಧಾರಿತ ಗಣತಿಯನ್ನು ನಡೆಸುವುದಿಲ್ಲ,ರಾಜ್ಯಗಳು ಅದನ್ನು ಮಾಡಬಹುದು ಎಂದು ಕೇಂದ್ರವು ಹೇಳಿತ್ತು. ಹೀಗಾಗಿ ನಾವು ಜಾತಿಯಾಧಾರಿತ ಗಣತಿಯನ್ನು ನಡೆಸುತ್ತಿದ್ದೇವೆ ’ಎಂದು ಕುಮಾರ್ ಹೇಳಿದರು.

ರಾಜ್ಯ ಸರಕಾರದ ಉದ್ದೇಶವು ಸ್ಪಷ್ಟವಾಗಿದೆ. ಅಭಿವೃದ್ಧಿ ಕಾರ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ನಡೆಯುವಂತಾಗಲು ಮತ್ತು ಕೇಂದ್ರದ ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್’ ಘೋಷಣೆಗಾಗಿ ಅದಕ್ಕೆ ಸರಿಯಾದ ದತ್ತಾಂಶಗಳನ್ನು ಒದಗಿಸಲು ಪ್ರತಿ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದರು.

‘ಜಾತಿಯಾಧಾರಿತ ಗಣತಿಯ ಸಂಪೂರ್ಣ ವರದಿಯನ್ನು ಬಹಿರಂಗಗೊಳಿಸಲಾಗುವುದು,ಪ್ರಕಟಿಸಲಾಗುವದು ಮತ್ತು ವಿತರಿಸಲಾಗುವುದು ಮತ್ತು ಕೇಂದ್ರಕ್ಕೂ ಸಲ್ಲಿಸಲಾಗುವುದು. ಅದು ಇಡೀ ದೇಶಕ್ಕೆ ಸೂಕ್ತ ಎಂದು ಅವರು ಭಾವಿಸಿದರೆ ಇತರ ರಾಜ್ಯಗಳಲ್ಲಿಯೂ ಅದು ಅನುಷ್ಠಾನಗೊಳ್ಳುತ್ತದೆ. ಇಲ್ಲದಿದ್ದರೆ ನಮ್ಮ ರಾಜ್ಯದಲ್ಲಿಯ ಬಡತನ ಕುರಿತು ಸ್ವಷ್ಟ ಚಿತ್ರವನ್ನು ನಾವು ಒದಗಿಸುತ್ತೇವೆ ’ಎಂದು ಕುಮಾರ್ ತಿಳಿಸಿದರು. ಎಸ್ಸಿಗಳು ಮತ್ತು ಎಸ್ಟಿಗಳನ್ನು ಹೊರತುಪಡಿಸಿ ಜಾತಿಯಾಧಾರಿತ ಗಣತಿಯನ್ನು ನಡೆಸುವಲ್ಲಿ ತನ್ನ ಅಸಾಮರ್ಥ್ಯವನ್ನು ಕೇಂದ್ರವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಜಾತಿಯಾಧಾರಿತ ಗಣತಿಯನ್ನು ಆರಂಭಿಸಿದೆ.

ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಗಣತಿಯನ್ನು ನಡೆಸಲಾಗುವುದು. ಜ.21ರವರೆಗೆ ನಡೆಯಲಿರುವ ಮೊದಲ ಹಂತದಲ್ಲಿ ಎಲ್ಲ ಕುಟುಂಬಗಳು ಒಳಗೊಳ್ಳಲಿವೆ. ಎಪ್ರಿಲ್‌ನಲ್ಲಿ ಆರಂಭಗೊಳ್ಳುವ ಎರಡನೇ ಹಂತದಲ್ಲಿ ಎಲ್ಲ ಜಾತಿಗಳು, ಉಪಜಾತಿಗಳು ಮತ್ತು ಧರ್ಮಗಳಿಗೆ ಸೇರಿದ ಜನರ ಕುರಿತು ಮತ್ತು ಅವರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಜಾತಿಯಾಧಾರಿತ ಗಣತಿಯು ಮೇ 2023ರ ವೇಳೆಗೆ ಪೂರ್ಣಗೊಳ್ಳಲಿದ್ದು,ಇದಕ್ಕಾಗಿ ಸರಕಾರವು ತನ್ನ ಸಾದಿಲ್ವಾರು ನಿಧಿಯಿಂದ 500 ಕೋ.ರೂ.ಗಳನ್ನು ವೆಚ್ಚ ಮಾಡಲಿದೆ.

ಬಿಹಾರ ರಾಜಕೀಯದಲ್ಲಿ ಜಾತಿಯಾಧಾರಿತ ಗಣತಿಯು ಪ್ರಮುಖ ವಿಷಯವಾಗಿದೆ. ಈ ಹಿಂದೆ 2010ರಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಷ್ಟ್ರಮಟ್ಟದಲ್ಲಿ ಜಾತಿಯಾಧಾರಿಯ ಗಣತಿಯನ್ನು ನಡೆಸಲು ಒಪ್ಪಿಕೊಂಡಿತ್ತು. ಆದರೆ ಗಣತಿಯ ಸಂದರ್ಭ ಸಂಗ್ರಹಿಸಿದ್ದ ಮಾಹಿತಿಗಳು ಎಂದೂ ಸಂಸ್ಕರಿಸಲ್ಪಟ್ಟಿರಲಿಲ್ಲ.

ಎರಡು ಹಂತಗಳಲ್ಲಿ ನಡೆಯುವ ಜಾತಿಯಾಧಾರಿತ ಗಣತಿಯು 38 ಜಿಲ್ಲೆಗಳಲ್ಲಿನ ಅಂದಾಜು 2.58 ಕ. ಕುಟುಂಬಗಳ ಸುಮಾರು 12.70 ಕೋ.ಜನರನ್ನು ಒಳಗೊಳ್ಳಲಿದೆ. 38 ಜಿಲ್ಲೆಗಳು 534 ಬ್ಲಾಕ್ಗಳು ಮತ್ತು 261 ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿದ್ದು,ಗಣತಿಯು 2023,ಮೇ 31ರ ವೇಳೆಗೆ ಪೂರ್ಣಗೊಳ್ಳಲಿದೆ.

ಐತಿಹಾಸಿಕ ಹೆಜ್ಜೆ ಜಾತಿಯಾಧಾರಿತ ಜನಗಣತಿಯು ‘ಐತಿಹಾಸಿಕ ಹೆಜ್ಜೆ ’ಯಾಗಿದೆ. ಇದು ಸಮಾಜದ ದುರ್ಬಲ ವರ್ಗಗಳು ಸೇರಿದಂತೆ ಜನರಿಗಾಗಿ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲು ವೈಜ್ಞಾನಿಕ ಮಾಹಿತಿಯನ್ನು ಒದಗಿಸುತ್ತದೆ. ಆಡಳಿತಾರೂಢ ಮಹಾಘಟಬಂಧನ್ನ ಎಲ್ಲ ಪಕ್ಷಗಳು ಜಾತಿಯಾಧಾರಿತ ಗಣತಿಯ ಪರವಾಗಿವೆ,ಬಿಜೆಪಿ ಸಮೀಕ್ಷೆಯನ್ನು ಟೀಕಿಸಿದೆ.

*ಉಪಮುಖ್ಯಮಂತ್ರಿ ತೇಜಸ್ವಿ ಯಾದವ್

Similar News