ವಿಮಾನ ಸಿಬ್ಬಂದಿಗೆ ಕಿರುಕುಳ: ಇಬ್ಬರು ವಿದೇಶಿ ಪ್ರಯಾಣಿಕರಿಗೆ ಗೇಟ್‌ಪಾಸ್
ಪಣಜಿ: ಚಲಿಸುತ್ತಿದ್ದ ವಿಮಾನದಲ್ಲಿ ಯಾನಿಗಳ ದುರ್ನಡತೆ ಘಟನೆ ವರದಿಯಾದ ಬೆನ್ನಲ್ಲೇ, ಗೋವಾದ ಮೋಪಾದಲ್ಲಿ ಹೊಸದಾಗಿ ಉದ್ಘಾಟನೆಗೊಂಡಿರುವ ಮನೋಹರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಥಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗೋವಾ- ಮುಂಬೈ ವಿಮಾನದಲ್ಲಿ ಇಬ್ಬರು ವಿದೇಶಿ ಪುರುಷ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.
ಈ ಇಬ್ಬರು ವಿದೇಶಿ ಪ್ರಯಾಣಿಕರ ರಾಷ್ಟ್ರೀಯತೆಯನ್ನು ವಿಮಾನಯಾನ ಸಂಸ್ಥೆ ಬಹಿರಂಗಪಡಿಸಿಲ್ಲ. ಹೊಸ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿದ ಮರುದಿನವೇ ಇಬ್ಬರು ವಿದೇಶಿ ಪ್ರಯಾಣಿಕರು ಗೋ ಫಸ್ಟ್ ವಿಮಾನ ಜಿ8 372ನಲ್ಲಿ ಶುಕ್ರವಾರ ಸಂಜೆ ವಿಮಾನ ಸಹಾಯಕಿಯರ ಜತಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಸಿಐಎಸ್‌ಎಫ್‌ಗೆ ನೀಡಿರುವ ದೂರಿನ ಪ್ರಕಾರ, ವಿದೇಶಿ ಪ್ರಯಾಣಿಕರಲ್ಲೊಬ್ಬ, ವಿಮಾನ ಸಹಾಯಕಿಯನ್ನು ತನ್ನ ಜತೆ ಕುಳಿತುಕೊಳ್ಳುವಂತೆ ಒತ್ತಾಯಪಡಿಸಿದ್ದ. ಇಬ್ಬರು ವಿದೇಶಿ ಪ್ರಯಾಣಿಕರನ್ನು ವಿಮಾನದಿಂದ ಕೆಳಕ್ಕೆ ಇಳಿಸಿ ಸಿಐಎಸ್‌ಎಫ್ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ವಿಮಾನಯಾನ ಸಂಸ್ಥೆ ತಕ್ಷಣವೇ ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರಗೆ ದೂರು ನೀಡಿದೆ.
"ಜಿ8 382 ವಿಮಾನದಲ್ಲಿ ಹಲವು ಮಂದಿ ವಿದೇಶಿಯರು ಇದ್ದರು. ವಿಮಾನ ಏರಿದ ತಕ್ಷಣವೇ ಅವರು ಅಶ್ಲೀಲ ಮಾತುಗಳನ್ನು ಆಡುತ್ತಿದ್ದರು. ಅದರ ತೀವ್ರತೆ ಹೆಚ್ಚುತ್ತಾ ಹೋಯಿತು. ಇವರು ಅಶ್ಲೀಲ ಪದಗಳನ್ನು ಬಳಸುತ್ತಿದ್ದ ಬಗ್ಗೆ ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರು" ಎಂದು ವಿಮಾನಯಾನ ಸಂಸ್ಥೆ ಅಧಿಕಾರಿ ಹೇಳಿದ್ದಾರೆ. ಇವರ ಕಿರಿ ಕಿರಿ ಸಹಿಸಲಾಗದೇ ಸಹ ಪ್ರಯಾಣಿಕರು ಇವರನ್ನು ಕೆಳಕ್ಕೆ ಇಳಿಸುವಂತೆ ಆಗ್ರಹಿಸಿದರು. ಸುರಕ್ಷತೆಯ ಹಿತದೃಷ್ಟಿಯಿಂದ ಇಬ್ಬರನ್ನೂ ಕೆಳಕ್ಕೆ ಇಳಿಸಲಾಯಿತು. ಈ ಬಗ್ಗೆ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು ಎಂದು ವಿವರಿಸಿದ್ದಾರೆ.