×
Ad

ʼಚೀನೀ ಮಾಂಜಾʼ ಗಾಳಿಪಟ ದಾರ ಮಾರಾಟ ಆರೋಪ: ಇಬ್ಬರು ಉದ್ಯಮಿಗಳ ಮನೆ ಧ್ವಂಸಗೊಳಿಸಿದ ಪೊಲೀಸರು

Update: 2023-01-08 11:28 IST

ಭೋಪಾಲ್: "ಚೀನೀ ಮಾಂಜಾ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗಾಜು ಲೇಪಿತ ಗಾಳಿಪಟದ ದಾರಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಕ್ಕಿಬಿದ್ದ ನಂತರ ಮಧ್ಯಪ್ರದೇಶ ಪೊಲೀಸರು ಇಬ್ಬರು ಉದ್ಯಮಿಗಳ ಮನೆಗಳನ್ನು ನಾಶಪಡಿಸಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ANI ಶನಿವಾರ ವರದಿ ಮಾಡಿದೆ.

ವರದಿಗಳ ಪ್ರಕಾರ, ಮನೆಗಳು ನಾಶವಾದ ಉದ್ಯಮಿಗಳನ್ನು ಮೊಹಮ್ಮದ್ ಇಕ್ಬಾಲ್ ಮತ್ತು ಹಿತೇಶ್ ಭೋಜ್ವಾನಿ ಎಂದು ಗುರುತಿಸಲಾಗಿದೆ. ಜನವರಿ 4 ರಂದು ಇಕ್ಬಾಲ್ ಅವರ ಮನೆ ಮತ್ತು ಮರುದಿನ ಭೋಜ್ವಾನಿ ಅವರ ಮನೆಯನ್ನು ಕೆಡವಲಾಯಿತು ಎಂದು ದಿ ವೈರ್ ವರದಿ ಮಾಡಿದೆ.

ಮನೆಗಳ ಭಾಗಗಳ ನಿರ್ಮಾಣವು ಅಕ್ರಮ ಎಂದು ಪೊಲೀಸರು ಪತ್ತೆಹಚ್ಚಿದ ನಂತರ ಆಡಳಿತವು ಈ ಕ್ರಮವನ್ನು ಕೈಗೊಂಡಿದೆ.

ಅಪರಾಧದ ಆರೋಪಿಗಳ ಮನೆಯನ್ನು ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲದಿದ್ದರೂ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ಇದೇ ರೀತಿಯ ಕ್ರಮವನ್ನು ಹಲವಾರು ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ನಿಯಮಿತವಾಗಿ ಕೈಗೊಳ್ಳಲಾಗುತ್ತಿದೆ.

ಗಾಳಿಪಟದ ದಾರದಿಂದ ಕುತ್ತಿಗೆ ಸೀಳಿ 21 ವರ್ಷದ ಯುವತಿ ಸಾವನ್ನಪ್ಪಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಉಜ್ಜಯಿನಿ ನಗರ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಮೀನಾ ಶನಿವಾರ ಎಎನ್‌ಐಗೆ ತಿಳಿಸಿದ್ದಾರೆ.

ಗಾಳಿಪಟದ ತಂತಿಯನ್ನು "ಚೀನೀ ಮಾಂಜಾ" ಎಂದು ಉಲ್ಲೇಖಿಸಲಾಗಿದ್ದರೂ, ಭಾರತದಲ್ಲಿ ತಯಾರಿಸಲಾಗುತ್ತದೆ. ಇದರ ಬಳಕೆ, ಮಾರಾಟ ಮತ್ತು ಉತ್ಪಾದನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2017 ರಲ್ಲಿ ನಿಷೇಧಿಸಿದೆ.

Similar News