ಶೀತ ಮಾರುತಕ್ಕೆ ತತ್ತರಿಸಿದ ರಾಷ್ಟ್ರ ರಾಜಧಾನಿ ದಿಲ್ಲಿ: ದಟ್ಟ ಮಂಜಿನ ವಾತಾವರಣದಿಂದ ರೈಲು, ವಿಮಾನ ಪ್ರಯಾಣ ವಿಳಂಬ

Update: 2023-01-08 07:26 GMT

ಹೊಸದಿಲ್ಲಿ: ಉತ್ತರ ಭಾರತದಾದ್ಯಂತ ತೀವ್ರ ಶೀತ ಮಾರುತ (Cold Wave) ಮುಂದುವರಿದಿದ್ದು, ದಿಲ್ಲಿಯ (Delhi) ಸಫ್ದರ್‌ಜಂಗ್‌ನಲ್ಲಿ 1.9 ಡಿಗ್ರಿ ಸೆಲ್ಷಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ರವಿವಾರ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಈ ನಡುವೆ ದಿಲ್ಲಿಯ ಆಯಾ ನಗರದಲ್ಲೂ 2.6 ಡಿಗ್ರಿ ಸೆಲ್ಷಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದ್ದು, ಲೋಧಿ ರಸ್ತೆಯಲ್ಲಿ 2.8 ಡಿಗ್ರಿ ಸೆಲ್ಷಿಯಸ್ ಮತ್ತು ಪಾಲಂನಲ್ಲಿ 5.2 ಡಿಗ್ರಿ ಸೆಲ್ಷಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.

ರವಿವಾರ ದಿಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳ ಮೇಲೆ ದಟ್ಟ ಮಂಜು ಆವರಿಸಿದ್ದು,  ಗೋಚರ ಪ್ರಮಾಣವನ್ನು ತಗ್ಗಿಸಿದೆ. ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ತೀವ್ರ ಶೀತ ಮತ್ತು ಮಂಜು ಮುಸುಕಿದ ವಾತಾವರಣ ಮುಂದುವರಿದಿವೆ.

ಪ್ರತಿಕೂಲ ಹವಾಮಾನ ಹಾಗೂ ಹಾರಾಟದ ಸಮಸ್ಯೆಯ ಕಾರಣಕ್ಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುರುವಾಗಬೇಕಿದ್ದ ವಿಮಾನ ಹಾರಾಟಗಳನ್ನು ರವಿವಾರ ಮಧ್ಯಾಹ್ನ ಒಂದು ಗಂಟೆಯವರೆಗೆ ಮುಂದೂಡಲಾಗಿದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಜು ಮುಸುಕಿದ ವಾತಾವರಣ ಇರುವುದರಿಂದ 42 ರೈಲುಗಳ ಸಂಚಾರವನ್ನು ಒಂದು ಗಂಟೆಯಿಂದ ಐದು ಗಂಟೆಯವರೆಗೆ ವಿಳಂಬಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ವಲಯದ ವಕ್ತಾರರು ಹೇಳಿದ್ದಾರೆ.

ಸೋಮವಾರದವರೆಗೆ ವಾಯುವ್ಯ ಭಾರತದಲ್ಲಿ ಶೀತ ಮಾರುತ ಹಾಗೂ ಶೀತ ವಾತಾವರಣದ ದಿನಗಳು ಮುಂದುವರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಮಂಗಳವಾರದ ನಂತರ ವಾಯುವ್ಯ ಭಾರತದ ಹಲವಾರು ಬಯಲು ಪ್ರದೇಶಗಳಲ್ಲಿ 2 ಡಿಗ್ರಿ ಸೆಲ್ಷಿಯಸ್ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇದೆ.

ಮಂಗಳವಾರದವರೆಗೆ ಪೂರ್ವ ಭಾರತ ಭಾರತದ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲವಾಗಿದ್ದು, ಮಂಗಳವಾರದ ನಂತರ 2-3 ಡಿಗ್ರಿ ಸೆಲ್ಷಿಯಸ್ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: ಎಂಟನೇ ತರಗತಿ ವಿದ್ಯಾರ್ಥಿನಿಗೆ 'ಪ್ರೇಮ ಪತ್ರ' ಬರೆದ ಶಿಕ್ಷಕನ ವಿರುದ್ಧ FIR ದಾಖಲು

Similar News