×
Ad

ವಿಷಪೂರಿತವಾಗಿದ್ದರೆ ಏನು ಮಾಡುವುದು?: ಪೊಲೀಸ್‌ ಕಚೇರಿಯಲ್ಲಿ ನೀಡಿದ ಚಹಾ ಸೇವಿಸಲು ನಿರಾಕರಿಸಿದ ಅಖಿಲೇಶ್‌ ಯಾದವ್‌

Update: 2023-01-08 19:33 IST

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರವಿವಾರ ಯುಪಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ತಮಗೆ ನೀಡಿದ ಚಹಾ ವಿಷಪೂರಿತವಾಗಿರಬಹುದು ಎಂದು ತಮಾಷೆ ಮಾಡಿದ್ದು, ಅದನ್ನು ಸೇವಿಸಲು ನಿರಾಕರಿಸಿದ್ದಾರೆ.   

ಸಮಾಜವಾದಿ ಪಕ್ಷದ ಪದಾಧಿಕಾರಿ ಮನೀಶ್ ಜಗನ್ ಅಗರ್ವಾಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮುಂಜಾನೆ ಬಂಧಿಸಲಾಗಿದ್ದು, ಅದರ ವಿರುದ್ಧ ಎಸ್ಪಿ ಕಾರ್ಯಕರ್ತರು ಉತ್ತರ ಪ್ರದೇಶ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿದ್ದ ಅಖಿಲೇಶ್‌ ಯಾದವ್‌ ರಿಗೆ ಚಹಾವನ್ನು ನೀಡಲಾಗಿದ್ದು, ಅದನ್ನು ಸೇವಿಸಲು ಅವರು ನಿರಾಕರಿಸಿದರು.

ಚಹಾವನ್ನು ನಿರಾಕರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಅಖಿಲೇಶ್‌ ಅವರು, "ಇಲ್ಲಿನ ಚಹಾವನ್ನು ನಾನು ಕುಡಿಯುವುದಿಲ್ಲ, ನಾನು ಹೊರಗಿನಿಂದ ಚಹಾವನ್ನು ಕುಡಿಯುತ್ತೇನೆ, ಇಲ್ಲಿನ ಚಹಾ ವಿಷಪೂರಿತವಾಗಿದ್ದರೆ ಏನು ಮಾಡುವುದು?" ಎಂದು ಪ್ರಶ್ನಿಸುವುದು ಕೇಳಿ ಬಂದಿದೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್‌, "ನಾನು ಪೊಲೀಸ್ ಹೆಡ್‌ ಕ್ವಾರ್ಟರ್ಸ್ ತಲುಪಿದಾಗ ಒಳಗೆ ಯಾರೂ ಇರಲಿಲ್ಲ, ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಸಮಸ್ಯೆ ಕೇಳಲು ಯಾರೂ ಇಲ್ಲದಿದ್ದರೆ, ಯುಪಿಯ ಉಳಿದ ಪ್ರದೇಶದ ಸ್ಥಿತಿ ಏನಾಗಿರಬಹುದು ಎಂದು ಊಹಿಸಿ," ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್, "ರವಿವಾರವಾದ್ದರಿಂದ ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಅಧಿಕಾರಿಗಳು ಹಾಜರಾಗಿದ್ದರು" ಎಂದು ತಿಳಿಸಿದರು.

Similar News