"ಮಹಿಳೆಯರು ಅಶಿಕ್ಷಿತರಾದರೆ ಮತ್ತು ಪುರುಷರು ಅಸಡ್ಡೆಯಿಂದಿದ್ದರೆ ಜನಸಂಖ್ಯೆ ಹೆಚ್ಚುತ್ತದೆ"

ವಿವಾದ ಸೃಷ್ಟಿಸಿದ ನಿತೀಶ್ ಕುಮಾರ್ ಹೇಳಿಕೆ

Update: 2023-01-08 17:21 GMT

ಪಾಟ್ನಾ, ಜ.8: ಮಹಿಳೆಯರು ಅಶಿಕ್ಷಿತರಾಗಿದ್ದರೆ ಮತ್ತು ಪುರುಷರು ಅಸಡ್ಡೆಯಿಂದಿದ್ದರೆ ರಾಜ್ಯದಲ್ಲಿ ಜನಸಂಖ್ಯೆಯು ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ವಿವಾದವನ್ನು ಸೃಷ್ಟಿಸಿದ್ದಾರೆ.

ತನ್ನ ‘ಸಮಾಧಾನ ಯಾತ್ರೆ’ಯ ನಡುವೆ ಶನಿವಾರ ವೈಶಾಲಿಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕುಮಾರ್, ಮಹಿಳೆಯರು ಓದಿದರೆ ಫಲವತ್ತತೆ ದರವು ಇಳಿಯುತ್ತದೆ. ಇದು ವಾಸ್ತವವಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ಸುಶಿಕ್ಷಿತರಾಗಿಲ್ಲ. ತಾನು ಪ್ರತಿದಿನ ಮಕ್ಕಳನ್ನು ಹುಟ್ಟಿಸಬೇಕಾಗಿಲ್ಲ ಎನ್ನುವುದು ಪುರುಷರ ಮನಸ್ಸಿನಲ್ಲಿ ಇರುವುದಿಲ್ಲ. ಮಹಿಳೆಯರು ಸುಶಿಕ್ಷಿತರಾಗಿದ್ದರೆ ಗರ್ಭವತಿಯಾಗುವುದರಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಿಳುವಳಿಕೆ ಅವರಲ್ಲಿರುತ್ತದೆ ಎಂದು ಹೇಳಿದರು.

ಕುಮಾರ್ ಅಸಭ್ಯ ಭಾಷೆಯನ್ನು ಬಳಸುವ ಮೂಲಕ ರಾಜ್ಯದ ಪ್ರತಿಷ್ಠೆಗೆ ಕಳಂಕವನ್ನುಂಟು ಮಾಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ. ರಾಜ್ಯದಲ್ಲಿ ಫಲವತ್ತತೆ ದರವನ್ನು ವಿವರಿಸಲು ಅಸಭ್ಯ ಭಾಷೆಯನ್ನು ಬಳಸುವ ಮೂಲಕ ಕುಮಾರ್ ತನ್ನ ಸ್ಥಾನವನ್ನೂ ಕಳಂಕಕ್ಕೆ ಗುರಿಯಾಗಿಸಿದ್ದಾರೆ ಎಂದು ಬಿಹಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಾಮ್ರಾಟ್ ಚೌಧರಿ ತರಾಟೆಗೆತ್ತಿಕೊಂಡಿದ್ದಾರೆ.

Similar News