ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯ ರಾಷ್ಟ್ರವಾಗಿ ಸೌದಿ ಆರೇಬಿಯ?: ಬ್ಲೂಂಬರ್ಗ್ ವರದಿ
ಕುಸಿಯಲಿರುವ ಭಾರತದ ಸ್ಥಾನ
ರಿಯಾದ್,ಜ.8: ಸೌದಿ ಆರೇಬಿಯವು 2023ರಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಭಾರತವನ್ನು ಎರಡನೆ ಸ್ಥಾನಕ್ಕೆ ಸರಿಸಲಿದೆ ಎಂದು ಅಮೆರಿಕದ ವಾಣಿಜ್ಯ ವಿಷಯಗಳ ಸುದ್ದಿಸಂಸ್ಥೆ ‘ಬ್ಲೂಂಬರ್ಗ್’ ವರದಿ ಮಾಡಿದೆ.
2022-23ನೇ ಸಾಲಿನಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರವು 7 ಶೇಕಡದಷ್ಟಿರುವುದಾಗಿ ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಟಾನ ಸಚಿವಾಲಯವು ಶುಕ್ರವಾರ ಬಿಡುಗಡೆಗೊಳಿಸಿದ ದತ್ತಾಂಶಗಳಿಂದ ತಿಳಿದುಬಂದಿದೆ. ಆದರೆ ಇದೇ ಅವಧಿಯಲ್ಲಿ ಸೌದಿ ಆರೇಬಿಯದ ಜಿಡಿಪಿ ದರವು ಶೇ.7.6ರಷ್ಟಿರಲಿದ್ದು, ಭಾರತವನ್ನು ಹಿಂದಿಕ್ಕುವ ನಿರೀಕ್ಷೆಯಿದೆಯೆಂದು ಬ್ಲೂಂಬರ್ಗ್ ವರದಿ ಹೇಳಿದೆ. ಅಧಿಕ ಇಂಧನ ದರಗಳಿಂದಾಗಿ ಆದಾಯದಲ್ಲಿ ಭಾರೀ ಏರಿಕೆಯಾಗಿರುವುದು, ಸೌದಿಯ ಆರ್ಥಿಕತೆಗೆ ಭಾರೀ ಉತ್ತೇಜನ ನೀಡಿದೆ ಎಂದು ಅದು ಹೇಳಿದೆ.
ಮಾರ್ಚ್ನಲ್ಲಿ ಕೊನೆಗೊಳ್ಳಲಿರುವ 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ.7ರಷ್ಟು ನಿರೀಕ್ಷಿತ ಜಿಡಿಪಿ ಬೆಳವಣಿಗೆ ಸಾಧಿಸಲಿದೆ. ಉತ್ಪನ್ನಗಳ ಬೇಡಿಕೆಯಲ್ಲಿನ ಕುಸಿತವು ಏಶ್ಯದ ಮೂರನೆ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವೆಂಬ ಹೆಗ್ಗಳಿಕೆ ಹೊಂದಿರುವ ಭಾರತದ ಜಿಡಿಪಿ ಬೆಳವಣಿಗೆ ಕುಸಿತಕ್ಕೆ ಕಾರಣವೆಂದು ಬ್ಲೂಂಬರ್ಗ್ ವಿಶ್ಲೇಷಿಸಿದೆ.,2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರವು ಶೇ.8.7ರಷ್ಟಿತ್ತು .