ಮುಂದಿನ ವರ್ಷದ ಚುನಾವಣೆಯಲ್ಲಿ ರಿಷಿ ಸುನಕ್ ಗೆ ಹೀನಾಯ ಸೋಲು: ಸಮೀಕ್ಷಾ ವರದಿ

Update: 2023-01-09 06:05 GMT

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹಾಗೂ ಅವರ 15 ಮಂದಿ ಸಂಪುಟ ಸಹೋದ್ಯೋಗಿಗಳು ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡು ನಾಮಾವಶೇಷವಾಗಲಿದ್ದಾರೆ ಎಂದು ಇತ್ತೀಚಿನ ಅಂಕಿ ಅಂಶಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪಕ್ಷದ ಹಿರಿಯ ಟೋರಿ ಸದಸ್ಯರಾದ ಪ್ರಧಾನಿ ಸುನಾಕ್, ಉಪ ಪ್ರಧಾನಿ ಡೊಮಿನಿಕ್ ರಾಬ್ ಮತ್ತು ಆರೋಗ್ಯ ಕಾರ್ಯದರ್ಶಿ ಸ್ಟೀವ್ ಬರ್ಕ್‌ಲೆ 2024ರ ಚುನಾವಣೆಯಲ್ಲಿ ಸೋಲು ಅನುಭವಿಸುವ ಸಾಧ್ಯತೆ ಇದೆ ಎಂದು ಇಂಡಪೆಂಡೆಂಟ್ ಪತ್ರಿಕೆಯ ಜತೆ ಹಂಚಿಕೊಂಡಿರುವ ಮತದಾನ ಬಗೆಗಿನ ಮಾಹಿತಿಯಿಂದ ತಿಳಿದು ಬಂದಿದೆ.

ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲೆ, ರಕ್ಷಣಾ ಕಾರ್ಯದರ್ಶಿ ಬೆನ್ ವೆಲೇಸ್, ವ್ಯಾಪಾರ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ಕಾಮನ್ಸ್ ಮುಖಂಡ ಪೆನ್ನಿ ಮಾಡ್ರಂಟ್ ಮತ್ತು ಪರಿಸರ ಕಾರ್ಯದರ್ಶಿ ಥೆರೇಸಾ ಕೊಫೆ ಕೂಡಾ ಸೋಲುವ ಸಾಧ್ಯತೆ ಇದೆ ಎಂದು ಫೋಕಲ್‌ಡಾಟಾ ಪೋಲಿಂಗ್ ಫಾರ್ ಬೆಸ್ಟ್ ಫಾರ್ ಬ್ರಿಟನ್ ಹೇಳಿದೆ.

ಜೆರೆಮಿ ಹಂಟ್, ಭಾರತೀಯ ಮೂಲದ ಸ್ಯುಯೆಲ್ಲಾ ಬ್ರೆವರ್‌ಮನ್, ಮೈಕೆಲ್ ಗೋವ್, ನದೀಂ ಝವಾವಿ ಮತ್ತು ಕೆಮಿ ಬಡೆನಾಕ್ ಅವರು ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಹತ್ತು ಪ್ರಮುಖ ಸ್ಥಾನಗಳ ಬಗ್ಗೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಎಲ್ಲ ಹತ್ತು ಸ್ಥಾನಗಳು ಲೇಬರ್ ಪಕ್ಷದ ಪಾಲಾಗಲಿವೆ. ಹಲವು ದಶಕಗಳಿಂದ ಈ ಕ್ಷೇತ್ರಗಳು ವಿಜೇತ ಪಕ್ಷಗಳ ಪರ ಒಲವು ತೋರಿಸುತ್ತಾ ಬಂದಿವೆ. ಸುನಾಕ್ ಸಂಪುಟ ನಾಮಾವಶೇಷವಾಗಲು ಯೋಗ್ಯವಾಗಿದೆ ಎಂದು ಬೆಸ್ಟ್ ಫಾರ್ ಬ್ರಿಟನ್‌ನ ಮುಖ್ಯ ಕಾರ್ಯನಿರ್ವಾಹಕ ನವೋಮಿ ಸ್ಮಿತ್ ಹೇಳಿದ್ದಾರೆ.

Similar News