98 ವರ್ಷದ ವಯೋವೃದ್ಧ ಕೈದಿ ಜೈಲಿನಿಂದ ಬಿಡುಗಡೆ: ಜೈಲು ಸಿಬ್ಬಂದಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

ವೀಡಿಯೊ ವೈರಲ್

Update: 2023-01-09 09:53 GMT

ಅಯೋಧ್ಯೆ: ಪ್ರಕರಣವೊಂದರಲ್ಲಿ ಐದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ 98 ವರ್ಷದ ವಯೋವೃದ್ಧ ಕೈದಿಯೊಬ್ಬರು ಅಯೋಧ್ಯೆ ಕಾರಾಗೃಹದಿಂದ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿಗಳು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಕ್ಕೀಡಾಗಿದ್ದ ರಾಮ್ ಸೂರತ್ ಎಂಬ 98 ವರ್ಷದ ವಯೋವೃದ್ಧರೊಬ್ಬರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 452, 323 ಮತ್ತು 352ರ ಅಡಿಯಲ್ಲಿ ನ್ಯಾಯಾಲಯವು ದೋಷಿ ಎಂದು ಘೋಷಿಸಿ, ಐದು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತ್ತು. ಐದು ವರ್ಷದ ಸೆರೆವಾಸ ಪೂರೈಸಿದ ರಾಮ್ ಸೂರತ್ ಅವರಿಗೆ ಜೈಲು ಸಿಬ್ಬಂದಿ ನೀಡಿರುವ ಹೃದಯಸ್ಪರ್ಶಿ ಬೀಳ್ಕೊಡುಗೆ ವಿಡಿಯೊವನ್ನು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು (ಕಾರಾಗೃಹ) ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆ ವಿಡಿಯೊದಲ್ಲಿ ಅಯೋಧ್ಯೆ ಜಿಲ್ಲಾ ಕಾರಾಗೃಹ ಅಧೀಕ್ಷಕ ಶಶಿಕಾಂತ್ ಮಿಶ್ರಾ ಪುತ್ರಾವತ್, ರಾಮ್ ಸೂರತ್ ಅವರಿಗೆ ಪೊಲೀಸರು ನಿಮ್ಮನ್ನು ನಿಮ್ಮ ಸ್ಥಳಕ್ಕೆ ಕರೆದೊಯ್ದು ಬಿಡುತ್ತಾರೆ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಇದರೊಂದಿಗೆ, ಸ್ವತಃ ಮಿಶ್ರಾ ಅವರು ಆ ವಯೋವೃದ್ಧರನ್ನು ಕಾರಿಗೆ ಹತ್ತಿಸುತ್ತಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.

ಅಲ್ಲದೆ, ಆ ವಿಡಿಯೊವನ್ನು "ಪರಹಿತ ಸೇವೆಗೆ ಯಾವುದೇ ಧರ್ಮವಿಲ್ಲ ಸಹೋದರ. 98 ವರ್ಷದ ಹಿರಿಯ ರಾಮ್ ಸೂರತ್ ಅವರನ್ನು ಬಿಡುಗಡೆಯ ನಂತರ ಕರೆದುಕೊಂಡು ಹೋಗಲು ಯಾರೂ ಬಂದಿಲ್ಲ. ಅಯೋಧ್ಯೆ ಜಿಲ್ಲಾ ಕಾರಾಗೃಹ ಅಧೀಕ್ಷಕ ಶಶಿಕಾಂತ್ ಮಿಶ್ರಾ ಪುತ್ರಾವತ್ ಅವರು  ಅವರನ್ನು ಕಾರಿನಲ್ಲಿ ಮನೆಗೆ ಕಳಿಸಿಕೊಟ್ಟಿದ್ದಾರೆ" ಎಂಬ ಟಿಪ್ಪಣಿಯೊಂದಿಗೆ ಹಂಚಿಕೊಳ್ಳಲಾಗಿದೆ.

ರಾಮ್ ಸೂರತ್ ಅವರು ಆಗಸ್ಟ್ 8, 2022ರಂದು ಜೈಲಿನಿಂದ ಬಿಡುಗಡೆಯಾಗಬೇಕಿತ್ತು. ಆದರೆ, ಮೇ 20, 2022ರಂದು ಅವರ ಆರೋಗ್ಯ ತಪಾಸಣೆ ಮಾಡಿದಾಗ ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿತ್ತು. ಹೀಗಾಗಿ ಅವರಿಗೆ 90 ದಿನಗಳ ಪೆರೋಲ್ ನೀಡಿ ಬಿಡುಗಡೆ ಮಾಡಲಾಗಿತ್ತು.

ಈ ವಿಡಿಯೊಗೆ ಟ್ವಿಟರ್‌ನಲ್ಲಿ 2000ಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಪ್ರತಿಕ್ರಿಯೆಗಳೂ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರ, "ಅವರನ್ನು ಯಾವ ಪ್ರಕರಣದಲ್ಲಿ ಜೈಲಿನಲ್ಲಿಡಲಾಗಿತ್ತು? ಅವರು ಜೈಲಿನಿಂದ ಬಿಡುಗಡೆಯಾಗುವಾಗ, ನಾನು ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿದ್ದು, ಅದರರ್ಥ ಅವರು ದೇವಸ್ಥಾನವೊಂದರ ಅರ್ಚಕರು ಎಂದಾಗಿದೆ. ಅವರ ನಡುಗುವ ಕೈಗಳು ಮತ್ತು ವಯಸ್ಸು ನಾನು ಯಾವುದೇ ಅಪರಾಧದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ" ಎಂದು ಬರೆದಿದ್ದಾರೆ.

"ನ್ಯಾಯ ಮತ್ತು ಕಾನೂನು ಪಾಲನೆಯು 98 ವರ್ಷದ ವೃದ್ಧರನ್ನು ಜೈಲು ಶಿಕ್ಷೆಗೆ ಗುರಿಪಡಿಸಿರುವುದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು. 98 ವರ್ಷದ ವೃದ್ಧರನ್ನು ಜೈಲಿನಲ್ಲಿಡುವುದು ಸಮರ್ಥನೀಯವಾಗಲಿ, ಮಾನವೀಯವಾಗಲಿ ಅಲ್ಲ!" ಎಂದು ಮತ್ತೊಬ್ಬ ಬಳಕೆದಾರ ಟೀಕಿಸಿದ್ದಾರೆ. ಮೂರನೆ ಬಳಕೆದಾರರೊಬ್ಬರು, "ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಯಾವುದೇ ಪದಗಳಿಲ್ಲ. ಅಂತಹ ಅದ್ಭುತ ಕ್ಷಣವಿದು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Similar News