ರಾಹುಲ್ ಗಾಂಧಿ ದೇಶದ ಗಂಭೀರ ನಾಯಕನಾಗಿ ಹೊರಹೊಮ್ಮಿದ್ದಾರೆ: ಶತ್ರುಘ್ನ ಸಿನ್ಹಾ ಶ್ಲಾಘನೆ

‘ಭಾರತ್ ಜೋಡೋ ಯಾತ್ರೆ ಚುನಾವಣೆಯಲ್ಲಿ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ’

Update: 2023-01-09 08:18 GMT

ಹೊಸದಿಲ್ಲಿ: ಭಾರತ್ ಜೋಡೋ ಯಾತ್ರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭವಾದಾಗಿನಿಂದ ಯಾತ್ರೆಗೆ ವಿವಿಧ ವಲಯಗಳಿಂದ ಬೆಂಬಲ ಸಿಕ್ಕಿದೆ.  ಅನೇಕ ಸೆಲೆಬ್ರಿಟಿಗಳು ಹಾಗೂ  ವಿರೋಧ ಪಕ್ಷದ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದ್ದಾರೆ. ರವಿವಾರ  ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಅವರು ಯಾತ್ರೆ ಹಾಗೂ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ.

"ಇದು ರಾಹುಲ್ ಗಾಂಧಿ ಹಾಗೂ  ಕಾಂಗ್ರೆಸ್ ಪಕ್ಷದ ಕ್ರಾಂತಿಕಾರಿ ಯಾತ್ರೆಯಾಗಿದೆ... ಭಾರತ್ ಜೋಡೋ ಯಾತ್ರೆಯು ಚುನಾವಣೆಯಲ್ಲಿ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ" ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಪಶ್ಚಿಮಬಂಗಾಳದ ಅಸನ್ಸೋಲ್‌ನ ಲೋಕಸಭಾ ಸಂಸದರಾಗಿರುವ ಸಿನ್ಹಾ, "ರಾಹುಲ್ ಗಾಂಧಿ ಈಗ ಪ್ರಬುದ್ಧರಾಗಿದ್ದಾರೆ ಹಾಗೂ  ತಿಂಗಳುಗಳ ಕಾಲದ ಪಾದಯಾತ್ರೆಯನ್ನು ಮುನ್ನಡೆಸುವಾಗ ಗಂಭೀರ ನಾಯಕರಾಗಿ ಹೊರಹೊಮ್ಮಿದ್ದಾರೆ'' ಎಂದರು.

“ರಾಹುಲ್ ಗಾಂಧಿ ಯುವಕರ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅವರ ಇಮೇಜ್ ಮೊದಲಿಗಿಂತ ಸಂಪೂರ್ಣ ಬದಲಾಗಿದೆ. ಕೆಲವರು ಅವರ ಇಮೇಜ್ ಅನ್ನು ನಾಶಮಾಡಲು ಪ್ರಯತ್ನಿಸುತ್ತಾರೆ.  ಆದರೆ ಅವರು ದೇಶದ ಗಂಭೀರ ನಾಯಕರಾಗಿ ಹೊರಹೊಮ್ಮಿದ್ದಾರೆ... ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ’’ ಎಂದು ಸಿನ್ಹಾ ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

ಕಾಂಗ್ರೆಸ್ ಪಕ್ಷವು ತನ್ನ ಮಹಿಳಾ ಸಬಲೀಕರಣದ ಅಜೆಂಡಾವನ್ನು ಪ್ರತಿಪಾದಿಸುತ್ತಿರುವ ಕಾರಣ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಇಂದು ಬಿಜೆಪಿ ಆಡಳಿತವಿರುವ ಹರ್ಯಾಣದಲ್ಲಿ ಸಂಪೂರ್ಣ ಮಹಿಳಾ ನಡಿಗೆಗೆ ಸಾಕ್ಷಿಯಾಗಿದೆ.

ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ರವಿವಾರ ಟ್ವಿಟ್ಟರ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.  ಇದನ್ನು ಅವರ ಪಕ್ಷದ ಸಹೋದ್ಯೋಗಿ ಮತ್ತು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಕೂಡ ಹಂಚಿಕೊಂಡಿದ್ದಾರೆ.

"ನಾಳೆ (ಸೋಮವಾರ) ಭಾರತ್ ಜೋಡೋ ಯಾತ್ರೆಯಲ್ಲಿ ಸಂಪೂರ್ಣ ಮಹಿಳಾ ನಡಿಗೆಯಾಗಿದೆ. ಅತ್ಯಂತ ರೋಚಕ ದಿನಗಳಲ್ಲಿಇದೂ  ಒಂದು. ರಾಹುಲ್ ಗಾಂಧಿ ಮಹಿಳಾ ಸಬಲೀಕರಣಕ್ಕೆ ಬದ್ಧರಾಗಿದ್ದಾರೆ, ಯಾತ್ರೆ ಎದುರು ನೋಡುತ್ತಿರುವೆ '' ಎಂದು ಜ್ಯೋತಿಮಣಿ ಬರೆದಿದ್ದಾರೆ.

Similar News