ಕಾನ್ಪುರ: ಒಂದೇ ವಾರದ ಅವಧಿಯಲ್ಲಿ ಹೃದಯಾಘಾತದಿಂದ 98 ಮಂದಿ ಸಾವು

Update: 2023-01-09 09:36 GMT

ಕಾನ್ಪುರ: ಕಳೆದ ಐದು ದಿನಗಳ ಅವಧಿಯಲ್ಲಿ ಹೃದಯಾಘಾತ (heart attack) ಮತ್ತು ಮಿದುಳು ಪಾರ್ಶ್ವವಾಯುಗೆ ಒಳಗಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur) 98 ಮಂದಿ ಮೃತಪಟ್ಟಿದ್ದಾರೆ ಎಂದು deccanherald.com ವರದಿ ಮಾಡಿದೆ.

98 ಸಾವುಗಳ ಪೈಕಿ 44 ಮಂದಿ ಆಸ್ಪತ್ರೆಯಲ್ಲಿ ಮೃತರಾಗಿದ್ದರೆ, ಉಳಿದ 54 ರೋಗಿಗಳು ಚಿಕಿತ್ಸೆಗೂ ಮುನ್ನವೇ ಅಸು ನೀಗಿದ್ದಾರೆ. ಈ ದತ್ತಾಂಶಗಳನ್ನು ಎಲ್.ಪಿ.ಎಸ್ ಹೃದ್ರೋಗ ಸಂಸ್ಥೆ ಬಿಡುಗಡೆ ಮಾಡಿದೆ.

ಕಾನ್ಪುರದ ಲಕ್ಚ್ಮಿಪತ್ ಸಿಂಘಾನಿಯಾ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆ ಸಂಸ್ಥೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ತುರ್ತು ಚಿಕಿತ್ಸೆ ಮತ್ತು ಹೊರರೋಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಹೃದ್ರೋಗ ಆಸ್ಪತ್ರೆಯಲ್ಲಿ ಶನಿವಾರದಂದು ತೀವ್ರ ಶೀತದಿಂದ ಬಳಲುತ್ತಿದ್ದ 14 ರೋಗಿಗಳು  ಹೃದಯಾಘಾತದಿಂದ ಮೃತಪಟ್ಟಿದ್ದರೆ, ಚಿಕಿತ್ಸೆಯ ಸಂದರ್ಭದಲ್ಲಿ ಆರು ಮಂದಿ ಮೃತರಾಗಿದ್ದಾರೆ. ಎಂಟು ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಗರದ ಎಸ್‌ಪಿ‌ಎಸ್ ಹೃದ್ರೋಗ ಸಂಸ್ಥೆಯಲ್ಲಿ 14 ರೋಗಿಗಳು ಮೃತಪಟ್ಟಿದ್ದು, ಈ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 54 ಹೊಸ ರೋಗಿಗಳು ಹಾಗೂ 27 ಹಳೆಯ ರೋಗಿಗಳು ಸೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೃದ್ರೋಗ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ, ಈ ಹವಾಮಾನದಲ್ಲಿ ರೋಗಿಗಳನ್ನು ಶೀತದಿಂದ ರಕ್ಷಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಲಕ್ನೊದ ಕಿಂಗ್ ಜಾರ್ಜ್‌ಸ್ ವೈದ್ಯಕೀಯ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ ಸದಸ್ಯರೊಬ್ಬರು, "ಶೀತ ಹವಾಮಾನದಲ್ಲಿ ಕೇವಲ ಹಿರಿಯ ವಯಸ್ಸಿನವರಿಗೆ ಮಾತ್ರ ಹೃದಯಾಘಾತವಾಗುವುದಿಲ್ಲ. ಹದಿಹರೆಯದವರೂ ಹೃದಯಾಘಾತಕ್ಕೊಳಗಾಗಿರುವ ಪ್ರಕರಣಗಳು ನಮ್ಮ ಬಳಿ ಬಂದಿವೆ. ಎಲ್ಲ ವಯೋಮಾನದವರೂ ಬೆಚ್ಚನೆಯ ಉಡುಪು ಧರಿಸಬೇಕು ಮತ್ತು ಸಾಧ್ಯವಾದಷ್ಟೂ ಒಳಾಂಗಣದಲ್ಲೇ ಉಳಿಯಲು ಪ್ರಯತ್ನಿಸಬೇಕು" ಎಂದು ಸಲಹೆ ನೀಡಿದ್ದಾರೆ.

Similar News