ಪಾನ್ ಮಸಾಲಾ ಪೊಟ್ಟಣದಲ್ಲಿ 40,000 ಡಾಲರ್ ಇಟ್ಟುಕೊಂಡು ಬ್ಯಾಂಕಾಕ್‌ಗೆ ಹಾರಲು ಯತ್ನಿಸಿದ ವ್ಯಕ್ತಿಯ ಬಂಧನ

Update: 2023-01-10 11:42 GMT

ಹೊಸದಿಲ್ಲಿ: ನೂರಾರು ಅಂಟಿಸಿದ ಪಾನ್ ಮಸಾಲಾ (Pan Masala) ಪೊಟ್ಟಣಗಳಲ್ಲಿ ರೂ. 32 ಲಕ್ಷ ಮೌಲ್ಯ ಹೊಂದಿದ್ದ ಅಮೆರಿಕ ಡಾಲರ್ (US dollar) ನೋಟುಗಳನ್ನು ತುಂಬಿಸಿಕೊಂಡು ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ಹಾರಲು ಸಿದ್ಧವಾಗಿದ್ದ ವ್ಯಕ್ತಿಯೊಬ್ಬನನ್ನು ಸೆರೆ ಹಿಡಿಯುವಲ್ಲಿ ಕೋಲ್ಕತ್ತಾದ ಸುಂಕ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

ವಾಯುಮಾರ್ಗ ಗುಪ್ತಚರ ಘಟಕದ ಅಧಿಕಾರಿಗಳು ನೀಡಿದ ಸುಳಿವನ್ನು ಆಧರಿಸಿ, ವಲಸೆ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ನಂತರ ಕೋಲ್ಕತ್ತಾ ಸುಂಕ ಇಲಾಖೆ ಅಧಿಕಾರಿಗಳು ಪ್ರಯಾಣಿಕನನ್ನು ತಡೆ ಹಿಡಿದಿದ್ದಾರೆ. ಅದಾಗಲೇ ತಪಾಸಣೆಗೊಂಡಿದ್ದ ಆತನ ಬ್ಯಾಗೇಜ್‌ಗಳನ್ನು ಮರು ತಪಾಸಣೆಗೆ ಒಳಪಡಿಸಿದಾಗ, ಪ್ರತಿ ಪಾನ್ ಮಸಾಲಾ ಪೊಟ್ಟಣಗಳಲ್ಲಿ 2 ಮತ್ತು 10 ಡಾಲರ್‌ ಮೌಲ್ಯದ ನೋಟುಗಳನ್ನು ತುರುಕಿರುವುದು ಕಂಡು ಬಂದಿದೆ. ಆ ನೋಟುಗಳ ಒಟ್ಟು ಮೌಲ್ಯ 40,000 ಡಾಲರ್ (ರೂ. 32,78,000) ಆಗಿದ್ದು, ಸುಂಕ ಇಲಾಖೆಯ ಅಧಿಕಾರಿಗಳು ಅವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿಡಿಯೊದಲ್ಲಿ ಅಧಿಕಾರಿಯೊಬ್ಬರು ಪೊಟ್ಟಣವನ್ನು ಹರಿದಾಗ, 10 ಡಾಲರ್ ಮೌಲ್ಯದ ನೋಟುಗಳನ್ನು ಒಪ್ಪವಾಗಿ ಜೋಡಿಸಿ, ಪೊಟ್ಟಣವನ್ನು ಪಾರದರ್ಶಕ ಪ್ಲಾಸ್ಟಿಕ್ ಟೇಪ್‌ನಿಂದ ಅಂಟಿಸಿರುವುದು ಕಾಣುತ್ತದೆ. ಇದರೊಂದಿಗೆ ಪುಡಿಯಂಥ ವಸ್ತು, ಮುಖ್ಯವಾಗಿ ಪಾನ್ ಮಸಾಲವನ್ನು ಪೊಟ್ಟಣದಲ್ಲಿ ತುಂಬಿಸಲಾಗಿದೆ. ಅಲ್ಲದೆ, ಭರ್ತಿಯಾಗಿರುವ ದೊಡ್ಡ ಟ್ರಾಲಿ ಬ್ಯಾಗ್‌ ತುಂಬಾ ಪಾನ್ ಮಸಾಲಾ ಪೊಟ್ಟಣಗಳನ್ನು ತುಂಬಿರುವುದೂ ವಿಡಿಯೊದಲ್ಲಿ ಕಂಡು ಬರುತ್ತದೆ.

ಇದನ್ನೂ ಓದಿ: ಚಳಿಯಲ್ಲೂ ಟೀ ಶರ್ಟ್ ಧರಿಸಲು ನಿರ್ಧರಿಸಿರುವುದಕ್ಕೆ ಕಾರಣ ತಿಳಿಸಿದ ರಾಹುಲ್ ಗಾಂಧಿ

Similar News