×
Ad

ಭಟ್ಕಳದ ಅಳ್ವೆಕೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಾರಿ ಜಾತ್ರೆಗೆ ಇಂದು ಚಾಲನೆ

Update: 2023-01-10 17:53 IST

ಭಟ್ಕಳ : ಶಿರಾಲಿಯ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸುಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ ಮಾರಿಕಾಂಬಾ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. 

ಅಳ್ವೆಕೋಡಿಯಲ್ಲಿ ಐದನೇ ಮಾರಿಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಗದ್ದುಗೆಯಲ್ಲಿ ವೀರಾಜಮಾನವಾದ ಮಾರಿಯಮ್ಮನ ದರುಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಅಳ್ವೆಕೋಡಿ ಸೇರಿದಂತೆ ತಾಲ್ಲೂಕು, ಹೊರ ತಾಲ್ಲೂಕಿನ ಜನರೂ ಸಹ ಮಾರಿ ಜಾತ್ರೆಗೆ ಆಗಮಿಸಿದ್ದು, ಮಾರಿಗೆ ಶ್ರದ್ಧಾಭಕ್ತಿ ಪೂರ್ವಕವಾಗಿ ಪೂಜೆ, ಹರಕೆ ಮುಂತಾದವುಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ  ದೇವಿಯ ದರುಶನವನ್ನೂ ಸಹ ಭಕ್ತರು ಪಡೆದರು.

ಅಳ್ವೆಕೋಡಿಯಲ್ಲಿ ಮಾರಿಜಾತ್ರೆಯ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜಾತ್ರೆಯಲ್ಲಿ ದೇವಿಯ ದರುಶನಕ್ಕೆ ಹೋಗುವ ಭಕ್ತರಿಗೆ ನೂಕುನುಗ್ಗಲು ಉಂಟಾಗದಂತೆ ತಡೆಯಲು, ಉತ್ತಮ ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಸಾವಿರಾರು ಜನರು ಪ್ರಸಾದ ಭೋಜನ ಸ್ವೀಕರಿಸಿದರು.

ಸುಮಾರು 800 ಕ್ಕೂ ಅಧಿಕ ಸ್ವಯಂ ಸೇವಕರ ತಂಡ ಜಾತ್ರೆಯ ಯಶಸ್ಸಿಗೆ ಕಾರ್ಯನಿರ್ವಹಿಸುತ್ತಿದೆ. ಅರ್ಚಕ ಮಕುಂದ ಪುರಾಣಿಕ ನೇತೃತ್ವದಲ್ಲಿ ಮಾರಿ ಜಾತ್ರೆಯ ಧಾರ್ಮಿಕ ವಿಧಿವಿಧಾನ ನಡೆಸಲಾಯಿತು.  ಮಾರಿ ಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಾರಿ ಜಾತ್ರಾ ಸಮಿತಿಯ ಸದಸ್ಯರು ಜಾತ್ರೆ ಯಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ 5 ಗಂಟೆಗೆ ಸಾವಿರಾರು ಭಕ್ತರು  ಬೃಹತ್ ಮೆರವಣಿಗೆಯಲ್ಲಿ ಮಾರಿ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕೃತ ವಾಹನದಲ್ಲಿ  12 ಕಿಮಿ ದೂರದ ಶಿರಾಲಿಯ ಗುಡಿಹಿತ್ತಲಿನ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ ಸಾಗಿ ನದಿಯಲ್ಲಿ ಮಾತಾಂಗಿ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. 

Similar News