ಭಟ್ಕಳದ ಅಳ್ವೆಕೋಡಿಯಲ್ಲಿ ನಡೆದ ಮಾರಿ ಜಾತ್ರೆ: ಆಶೀರ್ವಚನ ನೀಡಿದ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶ್ರೀಗಳು
ಭಟ್ಕಳ : ಇಂದಿನ ಜನಾಂಗ ನಮ್ಮ ಹಿಂದಿನ ಪರಂಪರೆಯಿಂದ ಬಂದ ಸಂಪ್ರದಾಯ, ಪದ್ದತಿ, ದೇವರ ಮೇಲಿನ ಭಕ್ತಿಯನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು. ದೇವರ ಕುರಿತಾಗಿ ಶ್ರದ್ಧಾಭಕ್ತಿ ಹೆಚ್ಚಿಸಿಕೊಂಡರೆ ಖಂಡಿತ ಉತ್ತಮ ಫಲ ಸಿಗುತ್ತದೆ ಎಂದು ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಹೇಳಿದರು.
ಅವರು ಮಂಗಳವಾರ ಶಿರಾಲಿಯ ಅಳ್ವೆಕೋಡಿಯ ಮಾರಿಜಾತ್ರೆಯ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತಿ ಹೊಂದಿ ಆಶೀರ್ವಚನ ನೀಡಿದರು.
ದೇವರ ಉಪಾಸನೆಯನ್ನು ಹೆಚ್ಚಿಸಿಕೊಳ್ಳಬೇಕು. ದೇವರ ಉಪಾಸನೆಯಿಂದ ಉತ್ತಮ ಫಲ ನಿರೀಕ್ಷಿಸಲು ಸಾಧ್ಯ. ಏಕ ವ್ಯಕ್ತಿ ಇರಲಿ, ಸಾಮೂಹಿಕವಾಗಿರಲಿ ಎಲ್ಲೆಲ್ಲೂ ಶ್ರದ್ಧಾ ಭಕ್ತಿ ಹೆಚ್ಚಾಗಬೇಕು ಎಂದ ಅವರು ಅಳ್ವೆಕೋಡಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯುವ ಮಾರಿ ಜಾತ್ರೆ ಎಲ್ಲರ ಸಹಕಾರದಿಂದ ಅದ್ಧೂರಿಯಾಗಿ ನಡೆಯುತ್ತಿರುವುದು ಮನಸ್ಸಿಗೆ ಸಂತಸ ತಂದಿದೆ. ಜಾತ್ರೆಯಲ್ಲಿ ಸ್ವಯಂ ಸೇವಕರ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರಲ್ಲದೇ ದುರ್ಗಾ ಮಾತೆಯ ಭಜನೆ ಹಾಡನ್ನು ತಾವೂ ಹಾಡಿ, ನೆರೆದಿದ್ದ ಭಕ್ತರಲ್ಲೂ ಹಾಡಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ, ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಮಾರಿ ಜಾತ್ರಾ ಮಹೋತ್ಸವ ರಾಜ್ಯಕ್ಕೆ ಮಾದರಿಯಾಗಿದೆ. ಜಾತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳು ವ್ಯವಸ್ಥಿತವಾಗಿ ಮಾಡಲಾಗಿದೆ. ಅಳ್ವೆಕೋಡಿಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದೇನೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಾರಿ ಜಾತ್ರಾ ಮಹೋತ್ಸವ ಅಧ್ಯಕ್ಷ ರಾಮ ಮೊಗೇರ, ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯನ್ನು ಮುಂದೂಡಲಾಗಿದ್ದು, ಶ್ರೀ ದೇವಿ ಆಜ್ಞೆಯಂತೆ ಈ ವರ್ಷ ಅದ್ಧೂರಿಯಾಗಿ ಜಾತ್ರೆ ನಡೆಸಿದ್ದೇವೆ ಎಂದರು .
ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಶ್ರೀಗಳ ಪಾದಪೂಜೆ ನೆರವೇರಿಸಿದರು.
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಹನುಮಂತ ನಾಯ್ಕ, ದೇವಸ್ಥಾನದ ಅರ್ಚಕ ಮುಕುಂದ ಪುರಾಣಿಕ ಉಪಸ್ಥಿತರಿದ್ದರು.