ಮುಂಡಗೋಡ: ಶ್ರೀ ಮಾರಿಕಾಂಬ ಜಾತ್ರಾಮಹೋತ್ಸವದ ಮೊದಲನೇ ಹೊರಬೀಡು ಸಂಪನ್ನ
ಮುಂಡಗೋಡ : ಜನವರಿ 31ರಿಂದ ಫೆಬ್ರುವರಿ 8ರ ವರೆಗೆ ನಡೆಯುವ ಮುಂಡಗೋಡದ ಗ್ರಾಮದೇವಿ ಶ್ರೀದ್ಯಾಮವ್ವದೇವಿ (ಶ್ರೀಮಾರಿಕಾಂಬಾದೇವಿ) ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಂಡಗೋಡ ಪಟ್ಟಣ, ನ್ಯಾಸರ್ಗಿ ಹಾಗೂ ಕಾಳಗನಕೊಪ್ಪ ಜನರು ಪಟ್ಟಣದ ಸಿಮೆಯನ್ನು ದಾಟಿ ಹೊರಗುಳಿದು ಮಂಗಳವಾರ ಮೊದಲನೇ ಹೊರಬೀಡು ಆಚರಿಸಿದರು.
ಮಂಗಳವಾರ ಪ್ರಥಮ ಹೊರಬೀಡು ದೇವಿಯ ಭಕ್ತರು ಮುಂಜಾನೆ ಮನೆಗಳನ್ನು ಸಾರಿಸಿ ಸಿಂಗರಿಸಿ ದೇವಿಗೆ ಪೂಜಿಸಿ, ಮನೆಮುಂದೆ ರಂಗೋಲಿಹಾಕಿ 10 ಗಂಟೆಗೆ ಮನೆಗಳಿಗೆ ಅಂಗಡಿ ಮುಗ್ಗಟ್ಟುಗಳಿಗೆ ವ್ಯಾಪಾರಸ್ಥರು ವ್ಯವಹಾರ ಬಂದ್‍ಮಾಡಿ ಮನೆ ಹಾಗೂ ಅಂಗಡಿಗಳಿಗೆ ಬೀಗಹಾಕಿ ಮುಂಡಗೋಡ ಗ್ರಾಮಗಡಿ ದಾಟಿ ಹೊರಹೋಗಿ ಸಂಜೆ 4-5 ಗಂಟೆಗೆ ಮನೆಗೆ ಹಿಂದಿರುಗುವ ಮೂಲಕ ಆಚರಣೆಯನ್ನು ಮಾಡಿದರು.
ಹೊರಬೀಡು ಸಂದರ್ಭದಲ್ಲಿ ಮುಂಡಗೋಡ ಪಟ್ಟಣದಲ್ಲಿ ಓಣಿ, ಬಡಾವಣೆ ರಸ್ತೆಗಳೆಲ್ಲಾ ಜನರ ಸಂಚಾರ ವಿಲ್ಲದೆ ಬೀಕೋ ಎನ್ನುವಂತಾಗಿತ್ತು. ಜನರೆಲ್ಲಾ ಮನೆಗಳಿಗೆ ಬೀಗ್ ಹಾಕಿ ಹೊರಹೋಗಿರುವುದರಿಂದ ಕಳ್ಳರು ಕೈಚಳಕ ತೋರಿಸಬಾರದು ಎಂದು ಪೊಲೀಸರು ಹದ್ದಿನ ಕಣ್ಣು ಇಟ್ಟು ಕಾಯುತ್ತಿರುವುದು ಕಂಡು ಬಂದಿತು.
ಹುಬ್ಬಳ್ಳಿ-ಶಿರಸಿ ರಸ್ತೆ ಹಾಗೂ ಬಂಕಾಪುರ-ಯಲ್ಲಾಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ನಿಗಾ ಇಟ್ಟಿರುವುದು ಕಂಡುಬಂದಿತು