ಶಾಲೆಗಳಲ್ಲಿ ಹಿಜಾಬ್ ವಿವಾದ: ರಾಜ್ಯ ಸರಕಾರದ ಪರ ವಾದಿಸಲು 88 ಲಕ್ಷ ರೂ. ಸಂಭಾವನೆ?

Update: 2023-01-11 03:56 GMT

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಬೈಸಿಕಲ್, ಶೂ, ಸಾಕ್ಸ್ ವಿತರಣೆಗೆ ಅನುದಾನದ ಕೊರತೆ ಎಂದು ನೆಪವೊಡ್ಡಿರುವ ಶಿಕ್ಷಣ ಇಲಾಖೆಯು ಹಿಜಾಬ್ ಧರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಇವರಿಗೆ 88.00 ಲಕ್ಷ ರೂ. ಸಂಭಾವನೆ ನೀಡಲು ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯು ವಿವಾದ ಸ್ವರೂಪ ಪಡೆದುಕೊಂಡಿದ್ದ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ಎಂದು ಹಿಜಾಬ್ ಪ್ರಕರಣವೂ ಮುನ್ನೆಲೆಗೆ ಬಂದಿತ್ತು. ಈ ಸಂಬಂಧ ಕುಂದಾಪುರ ಮೂಲದ ಫಾತಿಮಾ ಬುಶ್ರಾ ಎಂಬವರು ಸುಪ್ರೀಂ ಕೋರ್ಟ್ (ರಿಟ್ ಅರ್ಜಿ (ಸಿ) ಸಂಖ್ಯೆ; 95/2022) ಮೆಟ್ಟಿಲೇರಿದ್ದರು.

ಈ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಕಾಲತ್ತು ವಹಿಸಿದ್ದ ತುಷಾರ್ ಮೆಹ್ತಾ (ಸಾಲಿಸಿಟರ್ ಜನರಲ್ ಅಫ್ ಇಂಡಿಯಾ) ಅವರಿಗೆ ಒಂದು ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 9 ದಿನಗಳಿಗೆ (2022ರ ಆಗಸ್ಟ್ 29ರಿಂದ ಸೆ.22ರವರೆಗೆ) 39,60,000 ರೂ. ಮತ್ತು ಕೆ.ಎಂ. ನಟರಾಜ್ (ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ) ಇವರಿಗೆ ಪ್ರತೀ ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 11 ದಿನಗಳಿಗೆ (2022ರ ಅಗಸ್ಟ್ 29ರಿಂದ ಸೆ.22ರವರೆಗೆ) ಒಟ್ಟು 48,40,000 ರೂ. ನಿಗದಿಪಡಿಸಲಾಗಿತ್ತು ಎಂಬುದು ಗೊತ್ತಾಗಿದೆ. ಈ ಕುರಿತು ದಾಖಲೆಗಳು ‘the-file.in’ಗೆ (ಕಡತ ಸಂಖ್ಯೆ; ಇಡಿ 34 ಡಿಜಿಡಬ್ಲ್ಯೂ 2022) ಲಭ್ಯವಾಗಿವೆ.

ರಾಜ್ಯದ ಎಲ್ಲ ಸರಕಾರಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿತ್ತು. ಖಾಸಗಿ ಕಾಲೇಜುಗಳಲ್ಲಿ ಕೂಡ ಆಯಾ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಿದ್ದ ಹಿಜಾಬ್-ಕೇಸರಿ ಶಾಲು ವಿವಾದವು ರಾಜ್ಯವ್ಯಾಪಿ ಹರಡಿತ್ತು. ಹಾಗೆಯೇ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಪ್ರವೇಶ ನಿರಾಕರಿಸಿದ್ದರು. ಹಿಜಾಬ್ ಧರಿಸಿದವರಿಗೆ ಪ್ರವೇಶ ನಿರ್ಬಂಧಿಸಿದ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.

Similar News