×
Ad

‘ಭಾರತ್ ಜೋಡೊ’ ಯಾತ್ರೆ ತೆರೆಯುತ್ತಿರುವ ಪರ್ಯಾಯ ರಾಜಕಾರಣದ ಬಾಗಿಲು

Update: 2023-01-11 11:31 IST

ಯಾತ್ರೆಯು ಈ ದೇಶದ ಜನತೆಗೆ ತಮ್ಮನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆಗಳಿಂದ ದೂರವಿದ್ದು, ತಮ್ಮ ಸಾಮಾಜಿಕತೆಯ ಸಂಪ್ರದಾಯಗಳನ್ನು ಸಾಂವಿಧಾನಿಕ ಪರಿಭಾಷೆಯಲ್ಲಿ ಪುನರ್ವಿಮರ್ಶಿಸಲು ಕಾರಣಗಳನ್ನು ಒದಗಿಸಿದೆ. ರಾಜಕೀಯವು ಚುನಾವಣೆಯೊಂದಿಗೆ ಕೊನೆಗೊಳ್ಳುವುದಿಲ್ಲ; ಬದಲಾಗಿ ರಾಷ್ಟ್ರದ ದೈನಂದಿನ ರಾಜಕೀಯದಲ್ಲಿ ತೊಡಗಿರುವ ನಾಗರಿಕರ ಹೃದಯ ಮತ್ತು ಮನಸ್ಸಿನಲ್ಲಿ ಇರುತ್ತದೆ ಎಂದು ಅದು ನೆನಪಿಸಿದೆ.

ಇತ್ತೀಚಿನ ‘‘ಕಾಂಗ್ರೆಸ್ ಪಕ್ಷವು ತಪಸ್ಸಿನಲ್ಲಿ ನಂಬಿಕೆ ಇಟ್ಟಿದೆ’’ ಎಂಬ ರಾಹುಲ್ ಗಾಂಧಿ ಅವರ ಮಾತು ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಬಹಳ ಮಹತ್ವದ್ದು. ‘‘ಬಿಜೆಪಿಯು ಪೂಜೆಯ ಸಂಸ್ಥೆಯಾಗಿದೆ. ಬಿಜೆಪಿಯಾಗಲಿ, ಆರೆಸ್ಸೆಸ್ ಆಗಲಿ ತಪಸ್ಸನ್ನು ಗೌರವಿಸುವುದಿಲ್ಲ. ಆದರೆ ಪೂಜೆ ಮಾಡುವವರನ್ನು ಗೌರವಿಸಬೇಕೆಂತಲೂ ಮತ್ತು ತನ್ನನ್ನು ಪೂಜಿಸಬೇಕೆಂತಲೂ ಒತ್ತಾಯಿಸುತ್ತದೆ. ಮೋದಿ ಕೂಡ ಇದನ್ನೇ ಬಯಸುವುದು’’ ಎಂದರು ರಾಹುಲ್. ನೋಟು ರದ್ದತಿ ನಿರ್ಧಾರ ತೆಗೆದುಕೊಳ್ಳುವಾಗ ಬಡವರ ತಪಸ್ಸನ್ನು ಬಿಜೆಪಿ ಗೌರವಿಸಿತ್ತೇ ಎಂದು ಪ್ರಶ್ನಿಸಿದ ರಾಹುಲ್, ನಿಜಕ್ಕೂ ಇಲ್ಲ. ಅದು ತಪಸ್ಸಿನ ಮೇಲಾದ ಆಕ್ರಮಣ ಎಂದು ವ್ಯಾಖ್ಯಾನಿಸಿದರು. ಜನರಲ್ಲಿ ಭಯ ಹುಟ್ಟಿಸಿ, ಸರಕಾರಿ ಸಂಸ್ಥೆಗಳನ್ನು ಒಳಹಾಕಿಕೊಂಡು, ಹಣಬಲದ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಮಂದಿ ಒತ್ತಾಯದ ಪೂಜೆಯ ಕಡೆಗೆ ದೇಶವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ರಾಹುಲ್ ಹೇಳಿದರು.

ರಾಹುಲ್ ಅವರ ಮಾತುಗಳಲ್ಲಿನ ಪ್ರಬುದ್ಧತೆ, ಭಾರತ್ ಜೋಡೊ ಯಾತ್ರೆಯುದ್ದಕ್ಕೂ ಅವರು ತೋರುತ್ತಿರುವ ನಿಲುವಿನ ಹಿಂದೆಯೂ ಅಷ್ಟೇ ಪ್ರಖರವಾಗಿದೆ. ಭಾರತ್ ಜೋಡೊ ಯಾತ್ರೆಯು ದೇಶದ ರಾಜಕೀಯದಲ್ಲಿ ಹೊಸದೊಂದು ಸಾಧ್ಯತೆಯನ್ನು ತೆರೆಯುವಂತಿದೆ ಎಂದೇ ವಿಶ್ಲೇಷಕರು ಭಾವಿಸುತ್ತಾರೆ. ರಾಜಕೀಯವನ್ನು ಚುನಾವಣೆಯ ನಂಬರ್ ಗೇಮ್‌ನಿಂದ ದೂರವಿಡುವ ಪ್ರಯತ್ನವೊಂದು ಅಲ್ಲಿ ಕಾಣಿಸಿದೆ ಮತ್ತು ಅದನ್ನು ಹೆಚ್ಚು ಸೂಕ್ಷ್ಮವಾದ, ವಿವೇಚನಾಶೀಲ ನೆಲೆಗೆ - ಸಾಮಾಜಿಕ ಒಗ್ಗಟ್ಟು, ಬಹು ಸಾಂಗತ್ಯ, ಸಾಮೂಹಿಕ ಗುರುತು ಮತ್ತು ಪ್ರಜ್ಞೆಯಂತಹ ಪೌರತ್ವದ ಮೂಲ ಮೌಲ್ಯಗಳನ್ನು ಮರುಪಡೆಯುವ ಗುರಿಯ ನೆಲೆಗೆ ಕೊಂಡೊಯ್ಯುವ ನಡೆಯಂತಿದೆ.

ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗಿನ 3,500 ಕಿ.ಮೀ. ಯಾತ್ರೆಯನ್ನು ತೀರ್ಥಯಾತ್ರೆ ಎಂದು ಪರಿಗಣಿಸಬಹುದು ಮತ್ತು ಭಾಗವಹಿಸುವವರು ತಮ್ಮಂತಲ್ಲದ ಜನರನ್ನು ಎದುರುಗೊಳ್ಳುವುದರಿಂದ ತಮ್ಮನ್ನು ತಾವು ಮರುಶೋಧಿಸಿಕೊಳ್ಳುವ ಅವಕಾಶವು ಅಲ್ಲಿ ತೆರೆದುಕೊಳ್ಳುತ್ತದೆ ಎಂದು ಪರಿಗಣಿಸಬಹುದು. ಪರ್ಯಾಯ ರಾಜಕಾರಣದ ಅವಶ್ಯಕತೆಯು ದಟ್ಟವಾಗಿರುವ ಹೊತ್ತಲ್ಲಿ ಅಂತಹ ದೃಷ್ಟಿಕೋನವನ್ನು ಮೂಡಿಸುವಲ್ಲಿ ತನ್ನದೇ ಪಾಲನ್ನು ಭಾರತ್ ಜೋಡೊ ಯಾತ್ರೆ ಕೊಟ್ಟಿದೆ, ಕೊಡುತ್ತಿದೆ.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಮಾನದಂಡಗಳು ಬಹುಸಂಖ್ಯಾತ ರಾಜಕೀಯದಿಂದ ಹೆಚ್ಚಾಗಿ ಬುಡಮೇಲಾಗುತ್ತಿವೆ. ಜಾತ್ಯತೀತತೆಯ ಆದರ್ಶವನ್ನು ಪೊಳ್ಳು ಮಾಡಲಾಗುತ್ತಿದೆ. ಬಹುಸಂಖ್ಯಾತವಾದವು ನೈತಿಕ ಪರಿಗಣನೆಗಳನ್ನು ಹೊರಗಿಡಲು ಪ್ರಯತ್ನಿಸುವ ರಾಜಕೀಯ ಚೌಕಟ್ಟನ್ನು ರಚಿಸಿದೆ.

ಭಾರತೀಯ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರು ಯಾವ ಪಾತ್ರವನ್ನು ವಹಿಸುತ್ತಾರೆ? ರಾಜ್ಯ ಯಂತ್ರದಲ್ಲಿ ಸರಿಯಾದ ರಾಜಕೀಯ ಪ್ರಾತಿನಿಧ್ಯದ ಅನುಪಸ್ಥಿತಿಯಲ್ಲಿ ನಾವು ಅವರ ಹಿತಾಸಕ್ತಿಗಳನ್ನು ಹೇಗೆ ಕಾಪಾಡಬಹುದು? ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಅಸ್ಮಿತೆಯ ಮೇಲಿನ ನಿರಂತರ ದಾಳಿಯಿಂದ ಸುರಕ್ಷಿತರೆ? ಈ ಅವ್ಯವಸ್ಥೆಯಿಂದ ಹೊರಬರಲು ಮಾರ್ಗವಿದೆಯೇ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಈ ಪ್ರಶ್ನೆಗಳನ್ನು ಕೇಳಲು ಭಾರತವನ್ನು ಒತ್ತಾಯಿಸುತ್ತಿದೆ.

ಈ ಯಾತ್ರೆಯು ಇಲ್ಲಿಯವರೆಗೆ ಹಲವು ಬಗೆಯ ವಿಚಾರಗಳನ್ನು ಒಳಗೊಂಡಿದೆ. ನಿವೃತ್ತ ಅಧಿಕಾರಿಗಳು ಮತ್ತು ಸರಕಾರಿ ಅಧಿಕಾರಿಗಳು, ನಾಗರಿಕ ಸಮಾಜದ ಕಾರ್ಯಕರ್ತರು, ಮಾಧ್ಯಮ ಸಿಬ್ಬಂದಿ, ಸೇನೆಯ ಪರಿಣಿತರು, ರಾಜಕಾರಣಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಸಾಹಿ ಸಾಮಾನ್ಯ ಭಾರತೀಯರು ಹೀಗೆ ಹಲವು ಹಂತಗಳಿಂದ ಜನರನ್ನು ಸೆಳೆದಿದೆ. ಇದು ಮತ್ತೊಂದು ಯಾದೃಚ್ಛಿಕ ಘಟನೆ ಮಾತ್ರ ಎಂದು ಹೇಳಲು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಮತ್ತು ಅನೇಕ ರಾಜಕೀಯ ಗಣ್ಯರ ಉದ್ದೇಶಪೂರ್ವಕ ಪ್ರಯತ್ನದ ಹೊರತಾಗಿಯೂ, ಗಾಂಧಿಯವರ ಮೊಹಬ್ಬತ್ ಕಿ ದುಕಾನ್ ಅಥವಾ ಪ್ರೀತಿಯ ಅಂಗಡಿಯು ದೇಶವನ್ನು ಆಕರ್ಷಿಸಿದೆ.

ಯಾತ್ರೆಯ ಉದ್ದೇಶ ರಾಹುಲ್ ಗಾಂಧಿಯವರ ಇಮೇಜ್ ಹೆಚ್ಚಿಸುವುದಾಗಿದ್ದರೆ, ಆ ಗುರಿ ಈಡೇರಿದಂತಿದೆ. 2024ರ ರಾಷ್ಟ್ರೀಯ ಚುನಾವಣೆಗೆ ಕಾಂಗ್ರೆಸ್ ಈ ಸದ್ಭಾವನೆಯ ಲಾಭವನ್ನು ಪಡೆಯಬಹುದೇ ಎಂದು ನೋಡಬೇಕಾಗಿದೆ. ಆದರೆ ಇದನ್ನೂ ಮೀರಿ ಭಾರತ್ ಜೋಡೊ ಯಾತ್ರೆಯು ದೊಡ್ಡ ಆಶಯವನ್ನು ಹೊಂದಿದೆ. ಆತ್ಮರಹಿತವಾಗಿರುವ ರಾಜಕಾರಣಕ್ಕೆ ಆತ್ಮವನ್ನು ಮರಳಿಸುವ ಆಶಯ ಅದು. ಆದ್ದರಿಂದ, ಮೆರವಣಿಗೆಯು ಸಾರ್ವಜನಿಕ ಭಾಷಣದಲ್ಲಿ ಅಲ್ಪಸಂಖ್ಯಾತರ ಭಾಗವಹಿಸುವಿಕೆ ಮತ್ತು ನಮ್ಮ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿ ಸುವ ಬಹುತ್ವದ ಸಂಪ್ರದಾಯಗಳಿಗೆ ಹೆಚ್ಚು ತೆರೆದುಕೊಳ್ಳಬೇಕು.

ಯಾತ್ರೆಯು ಈ ದೇಶದ ಜನತೆಗೆ ತಮ್ಮನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆಗಳಿಂದ ದೂರವಿದ್ದು, ತಮ್ಮ ಸಾಮಾಜಿಕತೆಯ ಸಂಪ್ರದಾಯಗಳನ್ನು ಸಾಂವಿಧಾನಿಕ ಪರಿಭಾಷೆಯಲ್ಲಿ ಪುನರ್ವಿಮರ್ಶಿಸಲು ಕಾರಣಗಳನ್ನು ಒದಗಿಸಿದೆ. ರಾಜಕೀಯವು ಚುನಾವಣೆಯೊಂದಿಗೆ ಕೊನೆಗೊಳ್ಳುವುದಿಲ್ಲ; ಬದಲಾಗಿ ರಾಷ್ಟ್ರದ ದೈನಂದಿನ ರಾಜಕೀಯದಲ್ಲಿ ತೊಡಗಿರುವ ನಾಗರಿಕರ ಹೃದಯ ಮತ್ತು ಮನಸ್ಸಿನಲ್ಲಿ ಇರುತ್ತದೆ ಎಂದು ಅದು ನೆನಪಿಸಿದೆ.

ಪರ್ಯಾಯ ರಾಜಕೀಯಕ್ಕೆ - ನಾಗರಿಕರ ರಾಜಕೀಯಕ್ಕೆ ಜಾಗವನ್ನು ನೀಡುವ ಸಮಯ ಬಂದಿದೆ. ಅಂಚಿನಲ್ಲಿರುವ ಸಮುದಾಯಗಳು ನಮ್ಮ ರಾಷ್ಟ್ರೀಯತೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವ ತಮ್ಮ ಸಾಂವಿಧಾನಿಕ ಹಕ್ಕನ್ನು ಮರುಸ್ಥಾಪಿಸಲು ಧೈರ್ಯವಹಿಸುವ ಏಕೈಕ ಮಾರ್ಗ ಈ ಪರ್ಯಾಯ ರಾಜಕೀಯವಾಗಿದೆ.

ಆಧಾರ: scroll.in

Similar News