×
Ad

ಜಾನ್ಸನ್ ಸಂಸ್ಥೆಯ ಬೇಬಿಪೌಡರ್ ಮಾನದಂಡ ಉಲ್ಲಂಘಿಸಿದರೆ ತ್ವರಿತ ಕ್ರಮ

ಬಾಂಬೆ ಹೈಕೋರ್ಟ್ ಆದೇಶ

Update: 2023-01-11 12:30 IST

ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ತಯಾರಿಸುವ ಮಕ್ಕಳ ಪೌಡರ್‌ನ ಸ್ಯಾಂಪಲ್‌ಗಳು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಸಂಸ್ಥೆಯ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ತಿಳಿಸಿದೆ.

ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಪ್ರಾಧಿಕಾರಕ್ಕೆ ಸೂಚಿಸಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಉತ್ಪಾದಿಸುವ ಬೇಬಿ ಪೌಡರ್‌ನಲ್ಲಿ ಪಿಎಚ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚು ಇರುವುದು ಪತ್ತೆಯಾದ ಬಳಿಕ ಮುಂಬೈಯ ಮುಲುಂದ್ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟದ ಲೈಸೆನ್ಸ್ ರದ್ದುಗೊಳಿಸುವ ಆಹಾರ ಮತ್ತು ಔಷಧಿ ಪ್ರಾಧಿಕಾರದ 2022ರ ಸೆಪ್ಟಂಬರ್‌ನ ನಿರ್ಧಾರವನ್ನು ಪ್ರಶ್ನಿಸಿ ಜಾನ್ಸನ್ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ದ್ವಿಸದಸ್ಯ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

‘‘ನೀವು ಸೌಂದರ್ಯವರ್ಧಕಗಳು, ವಿಶೇಷವಾಗಿ ಔಷಧಿಗಳೊಂದಿಗೆ ವ್ಯವಹರಿಸುತ್ತಿರುವ ಕಾರಣ ನೀವು ಸಮಯದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ತಿಂಗಳು, ವರ್ಷಗಟ್ಟಲೆ ವಿಳಂಬ ಸಲ್ಲದು. ಸವಾಲುಗಳಿದ್ದಾಗ ನೀವು ಕಾರ್ಯನಿರ್ವಹಿಸಬೇಕಾದ ವೇಗವನ್ನು ನಾವು ನಿಗದಿಪಡಿಸುತ್ತೇವೆ’’ ಎಂದು ನ್ಯಾಯಪೀಠವು ಆಹಾರ ಮತ್ತು ಔಷಧಿ ಪ್ರಾಧಿಕಾರಕ್ಕೆ ಸೂಚಿಸಿದ್ದು ಬುಧವಾರ ಈ ಪ್ರಕರಣಕ್ಕೆ ಸಂಬಂಧಿಸಿದ ಆದೇಶ ಜಾರಿಗೊಳಿಸುವುದಾಗಿ ಹೇಳಿದೆ. ಜಾನ್ಸನ್ ಸಂಸ್ಥೆ ಮುಲುಂದ್‌ನ ಫ್ಯಾಕ್ಟರಿಯಲ್ಲಿ ಬೇಬಿ ಪೌಡರ್ ಉತ್ಪಾದಿಸಬಹುದು, ಆದರೆ ಮಾರಾಟ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ನವೆಂಬರ್ 16ರಂದು ಸೂಚಿಸಿತ್ತು.

Similar News