ಗೋವಿಂದ ಪನ್ಸಾರೆ ಹತ್ಯೆ ನಡೆದು 8 ವರ್ಷಗಳ ನಂತರ 10 ಮಂದಿ ವಿರುದ್ಧ ಆರೋಪ ದಾಖಲಿಸಿದ ನ್ಯಾಯಾಲಯ

Update: 2023-01-11 10:10 GMT

ಮುಂಬೈ:  ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ, ವಿಚಾರವಾದಿ  ಗೋವಿಂದ್ ಪನ್ಸಾರೆ Govind Pansare ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 10 ಮಂದಿಯ ವಿರುದ್ಧ ಮಹಾರಾಷ್ಟ್ರದ ಕೊಲ್ಹಾಪುರ ನಗರದ ವಿಶೇಷ ನ್ಯಾಯಾಲಯವು ಆರೋಪಗಳನ್ನು ದಾಖಲಿಸಿದೆ ಎಂದು PTI   ಬುಧವಾರ ವರದಿ ಮಾಡಿದೆ.

ಫೆಬ್ರುವರಿ 16, 2015 ರಂದು ಕೊಲ್ಹಾಪುರದಲ್ಲಿ ಬೆಳಗಿನ ನಡಿಗೆ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಇಬ್ಬರು ಅಪರಿಚಿತ ಬಂದೂಕುಧಾರಿಗಳ ದಾಳಿಗೆ ವಿಚಾರವಾದಿ ಪನ್ಸಾರೆ ಹತ್ಯೆಗೀಡಾದ ಸುಮಾರು ಎಂಟು ವರ್ಷಗಳ ನಂತರ ಈ ಬೆಳವಣಿಗೆ ನಡೆದಿದೆ. ಗುಂಡೇಟಿಗೆ ಒಳಗಾಗಿ ನಾಲ್ಕು ದಿನಗಳ ನಂತರ ಪನ್ಸಾರೆ ಅವರು ಬುಲೆಟ್ ಗಾಯಗಳಿಂದ ಸಾವನ್ನಪ್ಪಿದ್ದರು.

ವಿಶೇಷ ಭಯೋತ್ಪಾದನಾ ನಿಗ್ರಹ ದಳದ ನ್ಯಾಯಾಧೀಶ ಎಸ್‌.ಎಸ್. ತಾಂಬೆ ಸೋಮವಾರ ಸಮೀರ್ ಗಾಯಕ್ವಾಡ್, ವೀರೇಂದ್ರ ಸಿನ್ ತಾವ್ಡೆ, ಅಮೋಲ್ ಕಾಳೆ, ವಾಸುದೇವ್ ಸೂರ್ಯವಂಶಿ, ಭರತ್ ಕುರಾಣೆ, ಅಮಿತ್ ದೆಗ್ವೇಕರ್, ಶರದ್ ಕಲಾಸ್ಕರ್, ಸಚಿನ್ ಅಂದುರೆ, ಅಮಿತ್ ಬದ್ದಿ ಹಾಗೂ  ಗಣೇಶ್ ಮಿಸ್ಕಿನ್ ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ವಿನಯ್ ಪವಾರ್ ಹಾಗೂ  ಸಾರಂಗ್ ಅಕೋಲ್ಕರ್ ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ಸಾಕ್ಷಿಗಳ ಪಟ್ಟಿ ಹಾಗೂ  ತನಿಖಾ ಸಂಸ್ಥೆಗಳಿಂದ ದಾಖಲೆಗಳನ್ನು ಹಾಜರುಪಡಿಸುವಂತೆ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ಗೆ ತಿಳಿಸಿದರು ಎಂದು The Times of India ವರದಿ ಮಾಡಿದೆ.

Similar News