ರಣಜಿ: 379 ರನ್ ಗಳಿಸಿ ದಾಖಲೆ ನಿರ್ಮಿಸಿದ ಪೃಥ್ವಿ ಶಾ

ಟೂರ್ನಿಯ ಇತಿಹಾಸದಲ್ಲಿ 2ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಮುಂಬೈ ಬ್ಯಾಟರ್

Update: 2023-01-11 13:37 GMT

ಮುಂಬೈ, ಜ.11: ಅಸ್ಸಾಂ ವಿರುದ್ಧ ಬುಧವಾರ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕೇವಲ 382 ಎಸೆತಗಳಲ್ಲಿ ದಾಖಲೆಯ 379 ರನ್(49 ಬೌಂಡರಿ,4 ಸಿಕ್ಸರ್) ಸಿಡಿಸಿದ ಮುಂಬೈ ಬ್ಯಾಟರ್ ಪೃಥ್ವಿ ಶಾ Prithvi Shaw ಟೂರ್ನಮೆಂಟ್‌ನ ಇತಿಹಾಸದಲ್ಲಿ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಸಾಧನೆ ಮಾಡಿದರು.

ಭರ್ಜರಿ ಫಾರ್ಮ್‌ಗೆ ಮರಳಿರುವ ಶಾ ನೂತನ ಆಯ್ಕೆ ಸಮಿತಿಗೆ ಮುಂಬರುವ ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ ಸರಣಿಗೆ ತನ್ನನ್ನು ಕಡೆಗಣಿಸಬೇಡಿ ಎಂಬ ಸಂದೇಶವನ್ನು ರವಾನಿಸಿದರು.

1948ರ ಡಿಸೆಂಬರ್‌ನಲ್ಲಿ ಕಥಿಯಾವಾರ್ ವಿರುದ್ದ ಮಹಾರಾಷ್ಟ್ರದ ಪರ ಬಾವುಸಾಹೇಬ್ ನಿಂಬಾಳ್ಕರ್ ಅವರು ಔಟಾಗದೆ 443 ರನ್ ಗಳಿಸಿದ್ದರು. ಇದು ಈಗಲೂ ಭಾರತದ ಬ್ಯಾಟರ್ ಗಳಿಸಿದ ರಣಜಿ ಟ್ರೋಫಿಯ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ಉಳಿದುಕೊಂಡಿದೆ.

ಆಕ್ರಮಣಕಾರಿ ಆರಂಭಿಕ ಬ್ಯಾಟರ್ ಶಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ತ್ರಿಶತಕವನ್ನು ಗಳಿಸಿದರು. ಭಾರತದ ಮಾಜಿ ಬ್ಯಾಟರ್-ವೀಕ್ಷಕವಿವರಣೆಗಾರ ಸಂಜಯ್ ಮಾಂಜ್ರೇಕರ್ ದಾಖಲೆಯನ್ನು ಮುರಿದರು. 377 ರನ್ ಗಳಿಸುವ ಮೂಲಕ ಮಾಂಜ್ರೇಕರ್ ರಣಜಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮುಂಬೈ ಬ್ಯಾಟರ್ ಆಗಿದ್ದರು.

ರಣಜಿ ಟ್ರೋಫಿ ಇನಿಂಗ್ಸ್‌ನಲ್ಲಿ 350ಕ್ಕೂ ಅಧಿಕ ರನ್ ಗಳಿಸಿದ 9ನೇ ಬ್ಯಾಟ್ಸ್‌ಮನ್ ಶಾ. ಸ್ವಪ್ನಿಲ್ ಗುಗಾಲೆ(ಔಟಾಗದೆ 351), ಚೇತೇಶ್ವರ ಪೂಜಾರ(352), ವಿವಿಎಸ್ ಲಕ್ಷ್ಮಣ್(353), ಸಮಿತ್ ಗೊಯೆಲ್(ಔಟಾಗದೆ 359), ಎಂವಿ ಶ್ರೀಧರ್(366) ಹಾಗೂ ಮಾಂಜ್ರೇಕರ್(377)ಅವರನ್ನು ಶಾ ಹಿಂದಿಕ್ಕಿದ್ದಾರೆ.

ಭೋಜನ ವಿರಾಮಕ್ಕೆ ಮೊದಲು ಸ್ಪಿನ್ನರ್ ರಿಯಾನ್ ಪರಾಗ್‌ಗೆ ವಿಕೆಟ್ ಒಪ್ಪಿಸಿದ ಶಾ 400 ರನ್ ಗಳಿಸುವ ಅಪರೂಪದ ಅವಕಾಶದಿಂದ ವಂಚಿತರಾದರು.
 

Similar News