'The Kashmir Files' ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ ಎಂದ ವಿವೇಕ್ ಅಗ್ನಿಹೋತ್ರಿಗೆ ಕುಟುಕಿದ ಹನ್ಸಲ್ ಮೆಹ್ತಾ

Update: 2023-01-11 16:33 GMT

ಹೊಸದಿಲ್ಲಿ: ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳ ಪೈಕಿ ತಾವು ನಿರ್ದೇಶಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಕೂಡಾ ಸೇರಿದೆ ಎಂಬ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ(Hansal Mehta), ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಎಲ್ಲ 301 ಚಲನಚಿತ್ರಗಳೂ ಹೇಗೆ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯುವ ಚಿತ್ರಗಳಾಗಿರುವುದಿಲ್ಲ ಎಂಬ ವಿವರಣೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಪಟ್ಟಿ ಜನವರಿ 24ರಂದು ಬಿಡುಗಡೆಯಾಗಲಿದ್ದು, ಈ ಕುರಿತು ಟ್ವೀಟ್ ನ್ಯೂಯಾರ್ಕ್ ಮೂಲದ ಅಂಕಣಕಾರ-ಬರಹಗಾರ ಅಸೀಂ ಛಾಬ್ರಾ "ತನ್ನ ವಿಭಜಕ ಚಿತ್ರ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ ಎಂಬ ಚಿತ್ರ ನಿರ್ದೇಶಕರೊಬ್ಬರ ಪ್ರತಿಪಾದನೆ ಸುಳ್ಳು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆತನ ಚಿತ್ರ ಕೇವಲ ಆಸ್ಕರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿದೆ. ಲಾಸ್ ಏಂಜಲೀಸ್‌ನಲ್ಲಿ ಸೀಮಿತ ಪ್ರದರ್ಶನ ಕಂಡ ಯಾವುದೇ ಚಿತ್ರ ಕೂಡಾ ಆಸ್ಕರ್ ಪ್ರಶಸ್ತಿ ಸುತ್ತು ತಲುಪಲು ಅರ್ಹವಾಗಿದೆ" ಎಂದು ಬರೆದಿದ್ದಾರೆ. ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಹನ್ಸಲ್ ಮೆಹ್ತಾ, "ನೀವು ಓರ್ವ ಜನಾಂಗೀಯ ಹತ್ಯೆಯನ್ನು ನಿರಾಕರಿಸುವ ದೇಶದ್ರೋಹಿ" ಎಂದು ವ್ಯಂಗ್ಯವಾಡಿದ್ದಾರೆ.  

ತಮ್ಮ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸದವರನ್ನು 'ದೇಶದ್ರೋಹಿಗಳು' ಎಂದು ವಿವೇಕ್ ಅಗ್ನಿಹೋತ್ರಿ ಈ ಹಿಂದೆ ಹೇಳಿದ್ದರು. 

ಇದಕ್ಕೂ ಮುನ್ನ ತಮ್ಮ ಚಿತ್ರ ಆಸ್ಕರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ ಎಂದು ವಿವೇಕ್ ಅಗ್ನಿಹೋತ್ರಿ ಹರ್ಷ ವ್ಯಕ್ತಪಡಿಸಿದ್ದರು. ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಅನುಪಮ್ ಖೇರ್ ಕೂಡಾ ಅದೇ ಮಾತನ್ನು ಪುನರುಚ್ಚರಿಸಿದ್ದರು. ಅಲ್ಲದೆ ಅತ್ಯುತ್ತಮ ನಟ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರೂ ಸೇರಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಸಿನೆಮಾವೊಂದು ಆಸ್ಕರ್‌ ಪ್ರಶಸ್ತಿ ಗೆಲ್ಲಬೇಕಾದರೆ ದಾಟಬೇಕಾದ ವಿವಿಧ ಹಂತಗಳೇನು?

Similar News